ಜಿಲ್ಲೆ

ಎನ್​ಕೆಐಎಂಸಿ ವಿರುದ್ಧ ಎಫ್​ಐಆರ್

ಹುಬ್ಬಳ್ಳಿ: ಸಾರ್ವಜನಿಕರಿಂದ ಹಣ ಪಡೆದು ವಂಚಿಸಲು ಪ್ರಯತ್ನಿಸುತ್ತಿರುವ ಹುಬ್ಬಳ್ಳಿ ವಿಕಾಸ ನಗರದ ನಾರ್ಥ್ ಕರ್ನಾಟಕ ಇಂಡಸ್ಟ್ರೀಸ್ ಆಂಡ್ ಕಾಯಕ ಎಸ್​ಎಚ್​ಜಿ ಡೆವಲಪ್​ವೆುಂಟ್ ಆಂಡ್ ಮಾರ್ಕೆಟಿಂಗ್ ಕಾಪೋರೇಷನ್ (ಎನ್​ಕೆಐಕೆಎಸ್​ಎಚ್​ಜಿಡಿಎಂಸಿ) ಎಂ.ಡಿ. ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

‘ವಿಜಯವಾಣಿ’ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಮೋದಿ ಪ್ಯಾಕೇಜ್ ಹೆಸರಿನಲ್ಲಿ ವಂಚನೆ’ ಶೀರ್ಷಿಕೆಯ ವರದಿಗೆ ತಕ್ಷಣ ಸ್ಪಂದಿಸಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ವಂಚಕ ಸಂಸ್ಥೆಯ ವಿರುದ್ಧ ಪೊಲೀಸ್ ದೂರು ನೀಡುವಂತೆ ಜಿಲ್ಲಾ ಕೈಗಾರಿಕೆ ಕೇಂದ್ರ(ಡಿಐಸಿ)ದ ಜಂಟಿ ನಿರ್ದೇಶಕ ಮೋಹನ ಬರಮಕ್ಕನವರ ಅವರಿಗೆ ಸೂಚಿಸಿದ್ದರು. ಅದರಂತೆ, ಡಿಐಸಿ ಜಂಟಿ ನಿರ್ದೇಶಕರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.

ಇನ್​ಸ್ಪೆಕ್ಟರ್ ಎಸ್.ಕೆ. ಹೊಳೆಣ್ಣವರ ಅವರು ತಕ್ಷಣ ಕ್ರಮ ಕೈಗೊಂಡು ಆರೋಪಿ ಎ. ಮಲ್ಲಿಕಾರ್ಜುನ ಅವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದ್ದಾರೆ.

ಸಕಾಲಿಕ ಕ್ರಮ: ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಉಪನಗರ ಠಾಣೆ ಪೊಲೀಸರು ಎನ್​ಕೆಐಕೆಎಸ್​ಎಚ್​ಜಿಡಿಎಂಸಿ ಕಚೇರಿಗೆ ಭೇಟಿ ನೀಡಿದರು. ಅಲ್ಲಿಯ ಚಟುವಟಿಕೆ ಗಳನ್ನು ವೀಕ್ಷಿಸಿ, ಅಧಿಕೃತ ಏಜೆನ್ಸಿ ಎಂಬ ಕುರಿತು ದಾಖಲೆಗಳಿದ್ದರೆ ಒದಗಿಸುವಂತೆ ಕೇಳಿದ್ದರು. ಎ. ಮಲ್ಲಿಕಾರ್ಜುನ- ಒಂದಿಷ್ಟು ದಾಖಲೆ ನೀಡಿ ತನ್ನ ಸಂಸ್ಥೆ ನೋಂದಣಿಯಾಗಿದ್ದು ಎಲ್ಲ ರೀತಿಯಲ್ಲಿ ಅಧಿಕೃತವಾಗಿದೆ ಎಂದು ಹೇಳಿಕೊಂಡಿದ್ದರು. ಆತ ಕೊಟ್ಟ ದಾಖಲೆಗಳ ವಿಷಯದಲ್ಲಿ ಪೊಲೀಸರಿಗೆ ಅನುಮಾನ ಮೂಡಿತ್ತು. ಆತ ಹೇಳಿಕೊಂಡ ಸಂಗತಿಗಳ ಸತ್ಯಾಸತ್ಯತೆ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದರು. ಆತನ ದಾಖಲೆ, ಹೇಳಿಕೆಗಳು ನಂಬಿಕೆಗೆ ಅರ್ಹವಲ್ಲ ಎಂದು ಕೈಗಾರಿಕಾ ಅಧಿಕಾರಿಗಳು ತಿಳಿಸುತ್ತಿದ್ದಂತೆ ಪೊಲೀಸರು ಮಲ್ಲಿಕಾರ್ಜುನನ್ನು ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.

ಈ ಮಧ್ಯೆ, ಮಲ್ಲಿಕಾರ್ಜುನ ಕೊಟ್ಟ ಭರವಸೆ ನಂಬಿ ಹಣ ನೀಡಿರುವ ಕೆಲವರು ಉಪನಗರ ಠಾಣೆ ಪೊಲೀಸರನ್ನು ಸಂರ್ಪಸಿ, ತಮ್ಮ ಹಣ ವಾಪಸ್ ಕೊಡಿಸುವಂತೆ ವಿನಂತಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಕಚೇರಿಗೆ ಸಂರ್ಪಸಿ: ಕರೊನಾದಿಂದ ಕುಸಿತಗೊಂಡಿರುವ ಆರ್ಥಿಕತೆ ಸುಧಾರಣೆಗಾಗಿ ಕೇಂದ್ರ ಸರ್ಕಾರ ಆತ್ಮ ನಿರ್ಭರ ಪ್ಯಾಕೇಜ್ ಘೊಷಿಸಿದೆ. ನವ ಉದ್ಯಮಿಗಳು, ಸಣ್ಣ ಕೈಗಾರಿಕೋದ್ಯಮಿಗಳಿಗೆ ಈ ಪ್ಯಾಕೇಜ್ ಪ್ರೋತ್ಸಾಹದಾಯಕವಾಗಿದೆ. ಎಂಎಸ್​ಎಂಇಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ಔದ್ಯೋಗಿಕ ರಂಗದಲ್ಲಿ ಸಶಕ್ತರಾಗಬೇಕು. ಸರ್ಕಾರದ ಸೌಕರ್ಯ ಒದಗಿಸುವುದಾಗಿ ಹೇಳಿ ಕೆಲ ಮಧ್ಯವರ್ತಿಗಳು ಮುಗ್ಧ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗದೇ ನೇರವಾಗಿ ಸರ್ಕಾರದ ಕಚೇರಿಗಳನ್ನು ಸಂರ್ಪಸಿ ಅಥವಾ ಅಧಿಕೃತ ವೆಬ್​ಸೈಟ್​ಗಳಿಂದ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿತಿಳಿಸಿದ್ದಾರೆ.

ಹಣ ಕೇಳಿದರೆ ತಿಳಿಸಿ: ಸರ್ಕಾರದ ಯೋಜನೆಗಳ ಕುರಿತು ಸರ್ಕಾರದ ಅಧಿಕೃತ ವೆಬ್​ಸೈಟ್​ಗಳಲ್ಲಿ ಮಾಹಿತಿ ದೊರೆಯುತ್ತದೆ. ಎಂ.ಎಸ್.ಎಂ.ಇ.ಗಳನ್ನು ವೆಬ್​ಸೈಟ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ಸರ್ಕಾರದ ಸಂಸ್ಥೆ ಎಂಬಂತೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿ, ಜನರನ್ನು ವಂಚಿಸುವುದು ಅಪರಾಧ ಕೃತ್ಯವಾಗಿದೆ. ಜನರು ಇಂತಹ ವ್ಯಕ್ತಿ ಮತ್ತು ಸಂಸ್ಥೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಸರ್ಕಾರದ ಸೌಲಭ್ಯ ಕೊಡಿಸುವುದಾಗಿ ಹೇಳಿ, ಯಾರಾದರೂ ಮಧ್ಯವರ್ತಿಗಳು ಹಣ ಕೇಳಿದರೆ ಕೂಡಲೆ ಸಮೀಪದ ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮನವಿ ಮಾಡಿದ್ದಾರೆ.