ಸೊರಬ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದು ಪಡಿಸಿ, ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಪ್ರೊ. ಎಂ.ಎಚ್.ರಾಜಪ್ಪ ಮಾತನಾಡಿ, ಎನ್‌ಪಿಎಸ್ ಯೋಜನೆ ರಾಜ್ಯ ನೌಕರರಿಗೆ ಮರಣ ಶಾಸನವಾಗಿದೆ. ಸರ್ಕಾರ ಹಳೆಯ ಮಾದರಿಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು. ಇದರಿಂದ ನೌಕರರ ಅವಲಂಬಿತ ಕುಟುಂಬಸ್ಥರಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಕುಮಾರ್ ಬಂಗಾರಪ್ಪ, ಎನ್‌ಪಿಎಸ್ ನೌಕರರ ಪರವಾಗಿ ದ್ವನಿ ಎತ್ತಲು ಸಿದ್ಧನಾಗಿದ್ದೇನೆ. ಸರ್ಕಾರ ಸಹ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಾ ನೌಕರರ ಹಿತ ಕಾಯುತ್ತಿದೆ. ಅಧಿವೇಶನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಇದಕ್ಕೂ ಮೊದಲು ನೌಕರರು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಪಾದಯಾತ್ರೆ ನಡೆಸಿ, ಖಾಸಗಿ ಬಸ್ ನಿಲ್ದಾಣದ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ‘ಎನ್‌ಪಿಎಸ್ ಹಠಾವೋ, ನೌಕರರ ಬಚಾವೋ’ ಘೋಷಣೆಗಳನ್ನು ಕೂಗಿದರು.