ಜಿಲ್ಲೆ

ಎನ್‌ಡಿಆರ್‌ಎಫ್ ನಿಯಮ ತಿದ್ದುಪಡಿಗೆ ಆಗ್ರಹಿಸಿ ರೈತರ ಪ್ರತಿಭಟನೆ

ಮೈಸೂರು: ಎನ್‌ಡಿಆರ್‌ಎಫ್ ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡಲು ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.


ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ರೈತರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. 130 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.


ನರೇಗಾ ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಬೇಕು. ಅಂತರ್ಜಲ ವೃದ್ಧಿಸಲು ನೆರವು ನೀಡಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದೂ ಒತ್ತಾಯಿಸಿದರು.


ಕಾವೇರಿ ಜಲ ವಿವಾದದ ತೀರ್ಪಿನಲ್ಲಿ ನ್ಯಾಯ ಮಂಡಳಿಯಾಗಲಿ ಅಥವಾ ಸುಪ್ರೀಂಕೋರ್ಟ್ ಆಗಲಿ ಸಂಕಷ್ಟ ಸೂತ್ರಕ್ಕೆ ಸ್ಪಷ್ಟವಾದ ಮಾನದಂಡ ರೂಪಿಸಿಲ್ಲ. ಈ ಕಾರಣದಿಂದಾಗಿ ಮಳೆ ಕೊರತೆ ಸಂದರ್ಭದಲ್ಲಿ ಕಾವೇರಿ ಜಲ ವಿವಾದವು ಬಿಗಡಾಯಿಸಿದ್ದು, ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು.


ಕಬ್ಬು ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಶೇ.10.25 ಇಳುವರಿಯನ್ನು ಆಧಾರವಾಗಿ ಇಟ್ಟಿರುವುದು ರೈತರಿಗೆ ತೊಂದರೆಯಾಗುತ್ತದೆ. ಇದನ್ನು ಮಾರ್ಪಡು ಮಾಡಿ ಶೇ.8.5ಕ್ಕೆ ಇಳಿಸಬೇಕು. ಉತ್ಪನ್ನ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು, ಬೆಲೆ ನಿಗದಿಯಲ್ಲಿ ರೈತರನ್ನು ರಕ್ಷಿಸುವ ನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.


ರಾಜ್ಯದ 15 ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕೊಬ್ಬರಿ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1 ಕ್ವಿಂಟಾಲ್ ಕೊಬ್ಬರಿಗೆ 16,760 ರೂ. ಉತ್ಪನ್ನ ವೆಚ್ಚವಾಗುತ್ತದೆ. ಆದರೆ, ಕೇಂದ್ರ ಸರ್ಕಾರ 11,700 ರೂ. ನಿಗದಿಪಡಿಸಿದೆ. ಇದನ್ನು ಮರು ಪರಿಶೀಲಿಸಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.


ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪ್ರಸನ್ನ ಎನ್.ಗೌಡ, ನೇತ್ರಾವತಿ, ಪಿ.ಮರಂಕಯ್ಯ ಇನ್ನಿತರರಿದ್ದರು.