ಹಾಸನ: ಜಿಲ್ಲೆ ಮತ್ತು ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿದ್ದು,ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್‌ನ ಗೈಡ್‌ಲೈನ್‌ಯಿಂದ ಅರಸೀಕೆರೆ ತಾಲೂಕುನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬರದ ವಿಚಾರದಲ್ಲಿ ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ಗೈಡ್ ಲೈನ್ ದೋಷಪೂರಿತವಾಗಿದ್ದು, ಇದರಿಂದ ರಾಜ್ಯದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ತಕ್ಷಣವೇ ಇದನ್ನ ಕೇಂದ್ರ ಸರ್ಕಾರ ಸರಿಪಡಿಸಿ ರೈತರ ಅನುಕೂಲಕ್ಕೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಮಾರ್ಪಾಡು ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬರಪೀಡಿತ ತಾಲೂಕುಗಳ ಘೋಷಣೆ ಸಂಬಂಧಿಸಿದಂತೆ ಈ ಹಿಂದೆ ದೇಶಾದ್ಯಂತ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದಾಗ ಕೇಂದ್ರ ಸರ್ಕಾರಕ್ಕೆ ಎನ್‌ಡಿಆರ್‌ಎಫ್‌ಗೆ ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು. ಪ್ರಧಾನಿ ಮೋದಿಯವರು ಮಾತು ಕೊಟ್ಟಿದ್ದರು. ಆದರೆ ಈಗ ಮಾತಿಗೆ ತಪ್ಪಿದ್ದಾರೆ ಕಿಡಿಕಾರಿದರು.
ಜಿಲ್ಲೆಯಲ್ಲಿ ಒಂದು ತಾಲೂಕನ್ನು ಬರಪಿಡಿತ ಹಾಗೂ ಇನ್ನ ಉಳಿದ ಮೂರು ತಾಲೂಕುಗಳನ್ನ ಸ್ವಲ್ಪ ಪ್ರಮಾಣದ ಬರಪಿಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ನನ್ನ ಕ್ಷೇತ್ರ ಅರಸೀಕೆರೆಯಲ್ಲಿ ಮಳೆಯಾಗದೆ ಸಂಪೂರ್ಣ ಬೆಳೆಗಳೆಲ್ಲ ಒಣಗಿ ಹೋಗಿದೆ. ಆದರೂ ಕೂಡ ಘೋಷಣೆ ಮಾಡಿಲ್ಲ, ಈ ಸಂಬಂಧ ಇಂದು ಮುಖ್ಯಮಂತ್ರಿಯನ್ನ ಭೇಟಿ ಮಾಡಿ ಚರ್ಚೆ ನಡೆಸಿ ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ತಾಲೂಕಿನಲ್ಲಿ ಕಳೆದ ಏಪ್ರಿಲ್‌ನಿಂದ ಮೇ ತಿಂಗಳಲ್ಲಿ ಅಲ್ಪಸ್ವಲ್ಪ ಬಂದ ಮಳೆಗೆ ರೈತರು ಬಿತ್ತನೆ ಮಾಡಿದ್ದರು ಆದರೆ ಅದು ಸಂಪೂರ್ಣ ಹಾಳಾಗಿ ಹೋಗಿದೆ. ಮೇನಿಂದ ಆಗಸ್ಟ್ ಮೊದಲ ವಾರದಲ್ಲಿ ಸ್ವಲ್ಪ ಮಳೆಯಾಗಿದ್ದು, ಆಗ ಬಹುತೇಕ ಎಲ್ಲಾ ರೈತರು ರಾಗಿ, ಜೋಳ ಸೇರಿದಂತೆ ಇತರೆ ಬೆಳೆಗಳನ್ನ ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದೆ ಸಾವಿರಾರು ಹೆಕ್ಟರ್‌ನಲ್ಲಿ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಹೇಳಿದರು.
ಖಾಲಿ ಡಬ್ಬಗಳ ಮಳೆ ಮಾಪನ:ಪಂಚಾಯಿತಿ ಮಟ್ಟದಲ್ಲಿ ಮಳೆ ಮಾಪನ ಅಳವಡಿಸಿದ್ದಾರೆ ಅಲ್ಲಿ ಖಾಲಿ ಡಬ್ಬಗಳಿಂದ ಕೂಡಿದೆ ಇದರಿಂದಲೇ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ತಕ್ಷಣವೇ ಅದನ್ನ ತೆಗೆದು ವೈಜ್ಞಾನಿಕವಾಗಿ ಮಳೆಮಾಪನ ಮಾಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.
ಚಾಲೆಂಜ್ ಮಾಡುತ್ತೇನೆ:ಅರಸೀಕೆರೆ ತಾಲೂಕಿನಲ್ಲಿ ಶೇ 33ರಷ್ಟು ಮಳೆ ಬಂದಿದೆಯೇ ಎಂದು ವರದಿ ಆಗಿದೆ. ಆದರೆ ಅಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ ಎಂಬುದನ್ನ ನಾನು ಚಾಲೆಂಜ್ ಮಾಡುತ್ತೇನೆ. ಈ ಹಿಂದೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅರಸೀಕೆರೆ ತಾಲೂಕಿನಲ್ಲಿ ಮಳೆ ಬಂದಿಲ್ಲ ಎಂದು ವರದಿ ನೀಡಿದ್ದರು. ಈಗ ಮಳೆ ಬಂದಿದೆ ಎಂದು ಹೇಳಿರುವ ಮೂಲಕ ನಮ್ಮ ತಾಲೂಕನ್ನ ಎ ಗ್ರೇಡ್‌ಗೆ ಸೇರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.