ದಾವಣಗೆರೆ: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಕಡಿತ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎನ್‌ಎಸ್‌ಯುಐ ಪದಾಧಿಕಾರಿಗಳು ಕೇಂದ್ರ ಸಂಘದ ಕರೆ ಹಿನ್ನೆಲೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ದಾವಣಗೆರೆ ವಿವಿ ಸಂಯೋಜಿತ ಪಪೂ ಹಾಗೂ ಪದವಿ ಕಾಲೇಜುಗಳ ತರಗತಿ ಬಂದ್ ಮಾಡಿಸಿದ ಪ್ರತಿಭಟನಾಕಾರರು, ಕೆಲವು ಕಾಲೇಜು ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ತೆರಳಿ ದ್ವಾರದಲ್ಲಿ ಧರಣಿ ನಡೆಸಿ, ನಂತರ ಕುಲಪತಿ ಡಾ.ಬಿ.ಡಿ.ಕುಂಬಾರ ಅವರಿಗೆ ಮನವಿಪತ್ರ ಸಲ್ಲಿಸಿದರು.
ಕೈಬಿಡಲಾದ, ಪದವಿಪೂರ್ವ ಕಾಲೇಜುಗಳ ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮುಂದುವರಿಸಬೇಕು. ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ಪಡೆಯುವುದನ್ನು ತಡೆಯಬೇಕು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಪದವಿ ಕಾಲೇಜುಗಳಲ್ಲಿ ಪರೀಕ್ಷಾ ಫಲಿತಾಂಶ ತಡವಾಗುತ್ತಿದ್ದು ಸಕಾಲಕ್ಕೆ ಫಲಿತಾಂಶ ನೀಡಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ವಿಷಯ ತಜ್ಞರು, ವಿದ್ಯಾರ್ಥಿಗಳು ಹಾಗೂ ಪಾಲಕರ ಜತೆ ಚರ್ಚೆ ನಡೆಸದೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಬೇಡಿಕೆಗಳ ಈಡೇರಿಕೆಗೆ ನಿರ್ಲಕ್ಷಿಸಿದಲ್ಲಿ ಪ್ರತಿಭಟನೆ ತೀವ್ರವಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಲಿ ರಹಮತ್ ಪೈಲ್ವಾನ್, ದಾವಣಗೆರೆ ದಕ್ಷಿಣದ ಅಧ್ಯಕ್ಷ ಸೈಯದ್ ಸುಹೇಲ್, ದಾವಣಗೆರೆ ಉತ್ತರ ಘಟಕಾಧ್ಯಕ್ಷ ಮನೋಜ್, ದಾವಣಗೆರೆ ವಿವಿ ಘಟಕದ ಅಧ್ಯಕ್ಷ ಗಿರಿಧರ್ ಸಾತಳ್, ಪ್ರವೀಣ್, ಸೂರ್ಯ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳಿದ್ದರು.