ಹಾಸನ: ಹಾಸನ -ಹುಳಿಯಾರು ಹಿರಿಯೂರು 114 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಳ್ಳುವಂತಹ ರೈತರು ತಮಗೆ ಹೆಚ್ಚಿನ ಬೆಲೆ ನಿಗದಿಪಡಿಸುವಂತೆ ಜಿಲ್ಲಾಡಳಿತವನ್ನು ಮತ್ತು ಸಂಸದರನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಂತಿಗ್ರಾಮದಿಂದ ಪ್ರಾರಂಭವಾಗಿ ಹುಳಿಯಾರು - ಹಿರಿಯೂರು- ಚಿತ್ರದುರ್ಗ-ರಾಯಚೂರಿನಿಂದ ಆಂಧ್ರಪ್ರದೇಶ ಸಂಪರ್ಕ ಕಲ್ಪಿಸುವ ಯೋಜನೆಯಲ್ಲಿ ಜಿಲ್ಲೆಯಲ್ಲಿ ಭೂಮಿ ಹೋಗುವಂತಹ ಗ್ರಾಮದ ರೈತರು ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದರನ್ನು ಭೇಟಿ ಮಾಡಿ ನಮಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು. ಇದರಲ್ಲಿ ಯಾವುದೇ ತಾರತಮ್ಯವಾಗಬಹುದು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 36 ಗ್ರಾಮದ ರೈತರಿಂದ ಸುಮಾರು 250 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಅದರಂತೆ ಸರ್ವೇ ಕಾರ್ಯವನ್ನು ಆರಂಭಿಸಿದೆ. ಆದರೆ ನಮಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಅಲ್ಲದೆ ಕೆಲ ಗ್ರಾಮಗಳಿಗೆ ಹೆಚ್ಚಿನ ಬೆಲೆ, ಇನ್ನು ಕೆಲವು ಗ್ರಾಮಗಳಿಗೆ ಕಡಿಮೆ ಬೆಲೆ ನಿಗದಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಯಾವುದೇ ಕಾರಣಕ್ಕೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲಾ ರೈತರಿಗೂ ಕೂಡ ಹೆಚ್ಚಿನ ಬೆಲೆಯಲ್ಲಿ ಪರಿಹಾರ ನಿಗದಿಪಡಿಸಲಾಗುವುದು. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 17 ಗ್ರಾಮಗಳು ಬರುತ್ತವೆ. ಎಲ್ಲಾ ಗ್ರಾಮದಿಂದಲೂ ಇಬ್ಬರನ್ನು ಸೇರಿಸಿಕೊಂಡು ಒಂದು ಸಮಿತಿ ರಚನೆ ಮಾಡಿಕೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ. ಆ ಗ್ರಾಮಗಳಿಗೆ ಎಷ್ಟು ಪರಿಹಾರವನ್ನು ನಿಗದಿಪಡಿಸಬೇಕು ಎಂಬುದನ್ನು ಗ್ರಾಮದಲ್ಲಿ ಕುಳಿತುಕೊಂಡು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಾಗಿ ತಮ್ಮ ಜಮೀನು ಕಳೆದುಕೊಳ್ಳುತ್ತಿದ್ದೀರಾ. ನಿಮಗೆ ಹೆಚ್ಚಿನ ಪರಿಹಾರ ಒದಗಿಸಿಕೊಡಲಾಗುವುದು. ಇದರಲ್ಲಿ ಯಾರು ರಾಜಕೀಯ ಮಾಡಬಾರದು. ಅರಸೀಕೆರೆ ಕ್ಷೇತ್ರದಿಂದ ಬಂದಿರುವ ಗ್ರಾಮಸ್ಥರು ಕೂಡ ಅಲ್ಲಿಯ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಮತ್ತೊಮ್ಮೆ ಜಿಲ್ಲಾಧಿಕಾರಿ ಬಂದ ನಂತರ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ 2017ರಲ್ಲಿ ಘೋಷಣೆಯಾಗಿದೆ. 2023ರಲ್ಲಿ ನೋಟಿಫಿಕೇಶನ್ ಆಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ರೈತರು ಭಯ ಪಡಬೇಡಿ. ನಿಮಗೆ ಹೆಚ್ಚಿನ ಬೆಲೆ ಕೊಡಿಸಿ ಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾಂತಿಗ್ರಾಮ ಹೋಬಳಿಯ ಮೂರು ಗ್ರಾಮಗಳು ದುದ್ದ ಹೋಬಳಿಯ 14 ಗ್ರಾಮಗಳು ಹಾಗೂ ಅರಸೀಕೆರೆಯ ತಾಲೂಕಿನ 19 ಗ್ರಾಮದ ರೈತರ ಸುಮಾರು 250 ಹೆಕ್ಟೇರ್ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ಯಾರಿಗೂ ತೊಂದರೆಯಾಗುವುದಿಲ್ಲ. ಕೆಲ ಗ್ರಾಮಗಳಿಗೆ ಹೆಚ್ಚಿನ ಬೆಲೆ, ಇನ್ನು ಕೆಲ ಗ್ರಾಮಗಳಿಗೆ ಕಡಿಮೆ ಬೆಲೆ ನಿಗದಿ ಮಾಡಿರುವ ಬಗ್ಗೆ ತಿಳಿದುಬಂದಿದೆ. ಆದರೆ ಹೆಚ್ಚಿನ ಬೆಲೆ ನಿಗದಿಯಾಗುವ ಗ್ರಾಮದ 5 ಕಿ.ಮೀ. ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಕೂಡ ಅದೇ ಬೆಲೆಯನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಜಾಗಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಬರುತ್ತದೆ. ಇದರಿಂದ ರೈತರು ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ. ಯಾವುದಾದರೂ ಸಮಸ್ಯೆ ಕಂಡು ಬಂದರೆ ತಕ್ಷಣವೇ ರೈತರ ಪರವಾಗಿ ಹೋರಾಟ ನಡೆಸಲಾಗುವುದು. ಜಿಲ್ಲಾಧಿಕಾರಿ ವರ್ಗಾವಣೆಯಾಗಿದ್ದಾರೆ. ಹೊಸ ಜಿಲ್ಲಾಧಿಕಾರಿ ಬಂದ ತಕ್ಷಣ ಅವರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ನಟೇಶ್ ಅವರು ಗ್ರಾಮಗಳಿಗೆ ನಿಗದಿಯಾಗಿರುವ ದರಗಳನ್ನು ವಿವರಿಸಿದ್ದರು. ಈ ಸಂದರ್ಭದಲ್ಲಿ ಕೆಲ ರೈತರು ವಿರೋಧ ವ್ಯಕ್ತಪಡಿಸಿ, ನಮ್ಮ ಗ್ರಾಮಗಳಿಗೆ ಕಡಿಮೆ ಬೆಲೆ ನಿಗದಿ ಮಾಡುತ್ತಿದ್ದಾರೆ ಎಂದು ದೂರಿದರು. ಆಗ ರೇವಣ್ಣ ಅವರು ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಮಾಧಾನಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್, ಪ್ರಗತಿಪರ ಚಿಂತಕ ಮಂಜುನಾಥ ದತ್ತಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.
ತಂಗಿಗೆ ಸೂಕ್ತ ಬೆಂಬಲ ಬೆಲೆ ನಿಗದಿಗೆ ಒತ್ತಾಯ
ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ಭಾಗದಲ್ಲಿ ತೆಂಗು ಬೆಳೆಗಾರರು ಹೆಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆಂಗು ಮತ್ತು ಕೊಬ್ಬರಿ ಬೆಲೆ ಕುಸಿತ ಕಂಡಿದೆ. ಆದ್ದರಿಂದ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ ಸಂಸದ ಪ್ರಜ್ವಲ್ ರೇವಣ್ಣ ಒತ್ತಾಯಿಸಿದರು.
ಈ ಬೆಳೆಯನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಬೆಲೆ ತೀರಾ ಕುಸಿತವಾಗಿರುವುದರಿಂದ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇವರಿಗೆ ಬೆಂಬಲ ಬೆಲೆಯನ್ನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿಗಳು ಜಾರಿಯಾಗದಿದ್ದರೆ ಹೋರಾಟ
ಕಾಂಗ್ರೆಸ್ ಪಕ್ಷದವರು ಚುನಾವಣೆಪೂರ್ವದಲ್ಲಿ ಜನರಿಗೆ ಭರವಸೆಗಳನ್ನು ನೀಡಿದ್ದರು. ಆ ಎಲ್ಲಾ ಭರವಸೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿ, ಈಗ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಇವರು ಘೋಷಣೆ ಮಾಡುವುದಕ್ಕಿಂತ ಮುಂಚೆ ಒಪ್ಪಿಗೆ ಪಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಮೈತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು
ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂಬಂಧ ನನಗೇನೂ ಹೆಚ್ಚು ಗೊತ್ತಿಲ್ಲ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ನಾನು ಸಂಸದನಾಗಿ ಪಕ್ಷ ಸಂಘಟನೆ ಮತ್ತು ನನ್ನ ಕ್ಷೇತ್ರದ ಕಡೆ ಹೆಚ್ಚು ಗಮನ ಕೊಡುತ್ತಿದ್ದೇನೆ. ವರಿಷ್ಠರು ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಗ್ರಾಪಂ ಮಟ್ಟದಲ್ಲಿ ಸಭೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ನಾನು ನನ್ನ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸುತ್ತಿದ್ದೇನೆ. ಅಲ್ಲಿ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿ ಪರಿಶೀಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಸಂಸದರು ತಿಳಿಸಿದರು.
ಲೋಕಸಭೆಗೆ ನನಗೆ ಟಿಕೆಟ್ ಕೈತಪ್ಪುವ ವಿಚಾರ ಎಲ್ಲೂ ಕೂಡ ಚರ್ಚೆಗಳಾಗಿಲ್ಲ. ಗಾಳಿ ಸುದ್ದಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದ ಯಾವ ಮುಖಂಡರು ಮತ್ತು ವರಿಷ್ಠರು ಕೂಡ ಈ ಬಗ್ಗೆ ಮಾತನಾಡಿಲ್ಲ. ದೇವೇಗೌಡರ ಸ್ಪರ್ಧೆ ಬಗ್ಗೆ ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದರು.