ಜಿಲ್ಲೆ

ಎನ್ಇಪಿ ರದ್ದತಿ ಕೈಬಿಡಲು ಆಗ್ರಹ

ಬೀದರ್: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಶಾಖೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ಬ್ರಿಟಿಷರ ಕಾಲದ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಜಾರಿಯಲ್ಲಿತ್ತು. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತಂದು ಸುಧಾರಣೆ ಮಾಡಿದೆ. ರಾಜ್ಯದಲ್ಲಿ ಜಾರಿಗೊಳ್ಳುತ್ತಿರುವ ಹಂತದಲ್ಲೇ ರಾಜಕೀಯ ಸ್ವಾರ್ಥ ಸಾಧನೆಗೆ ರದ್ದುಗೊಳಿಸಲು ಮುಂದಾಗಿದ್ದು ಸರಿಯಲ್ಲ. ಕೂಡಲೇ ನಿರ್ಧಾರ ಹಿಂಪಡೆಯಬೇಕು. ರಾಜ್ಯ ಸರ್ಕಾರ ಶಿಕ್ಷಣವನ್ನು ರಾಜಕೀಯ ಸ್ವಾರ್ಥ ಸಾಧನೆ ವಸ್ತುವಾಗಿಸದೆ, ಸಣ್ಣ-ಪುಟ್ಟ ಕೊರತೆ, ದೋಷಗಳಿದ್ದಲ್ಲಿ ಸರಿಪಡಿಸಿ ಎನ್ಇಪಿ ವಿರೋಧಿ ನಿಲುವು ಕೈಬಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಶಶಿಕಾಂತ, ನಗರ ಸಂಘಟಕ ಹೇಮಂತ, ಅಮರೇಶ್, ಸಿದ್ಧಾರ್ಥ ಭಾವಿದೊಡ್ಡಿ, ದರ್ಶನ, ಅರುಣ, ಓಂ ಸಾಯಿ ಇತರರಿದ್ದರು. ಬೇಡಿಕೆ ಸಂಬಂಧ ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.