ಜಿಲ್ಲೆ

ಎನ್‌ಇಪಿ ಚರ್ಚೆ ಸಂಬಂಧ ಶಿಕ್ಷಣ ತಜ್ಞರ ಸಭೆ ನಾಳೆ

ಹಾಸನ: ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸೆ.23ರಂದು ಶಿಕ್ಷಣ ತಜ್ಞರ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಖಾಸಗಿ ಶಾಲೆಗಳ ಒಕ್ಕೂಟದ ನಿರ್ದೇಶಕ ಹೊ.ಸು. ರಮೇಶ್ ತಿಳಿಸಿದರು.

ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ರದ್ದು ಮಾಡಲು ಮುಂದಾಗಿರುವುದು ಖಂಡನೀಯ. ಎನ್‌ಇಪಿ ರದ್ದು ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಖಂಡಿಸಿ ಸೆ.23ರಂದು ನಗರದ ಎಂ.ಜಿ ರಸ್ತೆಯ ಬಳಿ ಇರುವ ಗುರುರಾಜ ಭವನದಲ್ಲಿ ಶಿಕ್ಷಣ ತಜ್ಞರ ಸಭೆ ಕರೆಯಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯ ಸರ್ಕಾರ ಏಕಾಏಕಿ ಎನ್‌ಇಪಿ ರದ್ದು ಮಾಡಲು ಮುಂದಾಗಿರುವ ಸರ್ಕಾರದ ನಡೆ ಖಂಡನೀಯ. ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡುವ ಮುನ್ನು ಶಿಕ್ಷಣ ತಜ್ಞರನ್ನು ಕರೆದು ಎನ್‌ಇಪಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎನ್‌ಇಪಿ ಸಂಬಂಧ ಚರ್ಚೆ ನಡೆಸಲು ಎಲ್ಲಾ ಶಿಕ್ಷಣ ತಜ್ಞರು, ಚಿಂತಕರು ಒಂದೆಡೆ ಸೇರಿ ಚರ್ಚಿಸಲು ಮುಂದಾಗಿದ್ದೇವೆ. ಸಭೆಗೆ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲಾ ಚಿಂತಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಎಚ್.ಪಿ. ನಟೇಶ್, ಎ.ಎಲ್. ನವೀನ್ ಕುಮಾರ್, ಕಾಂತರಾಜು, ವಿ.ಆರ್. ನಂದೀಶ್ ಇತರರು ಹಾಜರಿದ್ದರು.