ಮೈಸೂರು: ನಿವೃತ್ತ ಸರ್ಕಾರಿ ನೌಕರರಿಗೆ ಮಾರಕವಾಗಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ನು ರದ್ದು ಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆ ಶುಕ್ರವಾರ ನಗರಕ್ಕೆ ಆಗಮಿಸಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಗಮಸಿದ ಸಂಕಲ್ಪ ಯಾತ್ರೆಯನ್ನು ಸಂಘದ ಪದಾಧಿಕಾರಿಗಳು, ಸದಸ್ಯರು, ಸರ್ಕಾರಿ ನೌಕರರು ಸ್ವಾಗತಿಸಿದರು.
ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಅಭದ್ರತೆಗೆ ತಳ್ಳುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರಿ ನೌಕರರು ಬೀದಿಗೆ ಇಳಿಯಲು ತಯಾರಿ ನಡೆಸಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ ವಾಪಸಿಗೆ ಆಗ್ರಹಿಸಿ ಸರ್ಕಾರಿ ನೌಕರರು ಹೋರಾಟಕ್ಕೆ ಇಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ. ಡಿಸೆಂಬರ್ 19ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಅವಿತರ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಶಾಂತರಾಮು ತಿಳಿಸಿದರು.
ಬಜೆಟ್ ಘೋಷಣೆ ಮುನ್ನ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ, ಇದುವರೆವಿಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇಂದಿನ ಜಾಗತಿಕ ತಲ್ಲಣಗಳಿಂದ ಷೇರು ಮಾರುಕಟ್ಟೆಯಲ್ಲಿ ಪಿಂಚಣಿ ಹಣ ಹೂಡಿಕೆ ಮಾಡುವುದು ತರಲ್ಲ. ಹೀಗಾಗಲೇ ಹಲವು ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಬಂಡವಾಳ ಹಿಂತೆಗೆದುಕೊಳ್ಳಲು ಮುಂದಾಗಿದ್ದು, ಎನ್‌ಪಿಎಸ್ ಪಿಂಚಣಿದಾರರನ್ನು ಆತಂಕಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.
ಈ ಯೋಜನೆಯಡಿ 900 ರೂ.ನಿಂದ 2500 ರೂ. ಮಾತ್ರ ಪಿಂಚಣಿ ದೊರೆಯುತ್ತದೆ. ಈ ಅನಾನುಕೂಲವನ್ನು ಮನಗಂಡು ರಾಜಸ್ಥಾನ, ಛತ್ತೀಸಘಡ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಎನ್‌ಪಿಎಸ್ ರದ್ದು ಪಡಿಸಿವೆ. ಅದೇ ಮಾದರಿ ಕರ್ನಾಟಕದಲ್ಲಿಯೂ ಎನ್‌ಪಿಎಸ್ ತೆರವುಗೊಳಿಸುವಂತೆ ಅಂತಿಮ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ನಾಗನಗೌಡ, ಚಂದ್ರಕಾಂತ, ಲಕ್ಷ್ಮೇಗೌಡ, ಪ್ರವೀಣ್, ಗಜೇಂದ್ರ ಇತರರು ಇದ್ದರು.