ಜಿಲ್ಲೆ

ಎತ್ತು ಮಾರಿದ ಹಣ ಕೊಡದ ತಾಯಿ ಕೊಂದ ಮಗ

ಬೈಲುಕುಪ್ಪೆ: ಎತ್ತುಗಳನ್ನು ಮಾರಿದ ಹಣವನ್ನು ತನಗೆ ಕೊಡಲಿಲ್ಲ ಎಂದು ಕೋಪಗೊಂಡ ಪುತ್ರ ತಾಯಿಯನ್ನು ದೊಣ್ಣೆ, ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದಾನೆ.

ಪಿರಿಯಾಪಟ್ಟಣ ತಾಲೂಕು ನವಿಲೂರು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ತಮ್ಮಯ್ಯ ಅವರ ಪತ್ನಿ ಗೌರಮ್ಮ(60)ಕೊಲೆಯಾದವರು. ಎರಡನೇ ಪುತ್ರ ಸ್ವಾಮಿ(40) ಕೊಲೆಗೈದ ಆರೋಪಿಯಾಗಿದ್ದಾನೆ.

ತಂದೆ ತಮ್ಮಯ್ಯ ಅವರು ಒಂದು ಜೊತೆ ಎತ್ತುಗಳನ್ನು ಮಾರಾಟ ಮಾಡಿದ್ದರು. ಎತ್ತುಗಳನ್ನು ಮಾರಾಟ ಮಾಡಿದ ಹಣದಲ್ಲಿ ನನಗೂ ಪಾಲು ಕೊಡಿ ಎಂದು ಆರೋಪಿ ಸ್ವಾಮಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ.

ತಂದೆ ತಮ್ಮಯ್ಯ ಅವರು ಆರೋಗ್ಯ ಸರಿಯಿಲ್ಲದ ಕಾರಣ ಬೈಲುಕುಪ್ಪೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ತಾಯಿ ಮಲಗಿದ್ದಾಗ ಆರೋಪಿ ಸ್ವಾಮಿ ತಾಯಿಯನ್ನು ದೊಣ್ಣೆ, ಕಲ್ಲಿನಿಂದ ಹೊಡೆದು ಕೊಂದಿದ್ದಾನೆ.

ಕೆಲಸಕ್ಕೆ ಜಮೀನಿಗೆ ತೆರಳಿದ್ದ ಸಹೋದರ ಸುರೇಶ್ ಮನೆಗೆ ಬಂದು ನೋಡಿದಾಗ ತಾಯಿ ಗೌರಮ್ಮ ಮೃತಪಟ್ಟು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಅಣ್ಣ ಸ್ವಾಮಿಯ ಮೇಲೆ ಅನುಮಾನಗೊಂಡು ಬೈಲಕುಪ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣಾಧಿಕಾರಿ ರವಿಕುಮಾರ್ ಅವರು ಪ್ರಕರಣ ದಾಖಲಿಸಿಕೊಂಡು ಸ್ವಾಮಿಯನ್ನು ವಿಚಾರಣೆಗೊಳಪಡಿಸಿದರು.

ಸ್ವಾಮಿ ಮೈಮೇಲಿನ ಬಟ್ಟೆಯಲ್ಲಿ ರಕ್ತದ ಕಲೆ ಕಂಡುಬಂದಿದ್ದು, ವಿಚಾರಣೆಯಲ್ಲಿ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಎಸ್ಪಿ ವಿಷ್ಣುವರ್ಧನ್, ವೃತ್ತ ನಿರೀಕ್ಷಕ ದೀಪಕ್, ಪಿಎಸ್ಸೈ ರವಿಕುಮಾರ್ ಸ್ಥಳ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೃತ ಗೌರಮ್ಮ ಅವರ ಶವವನ್ನು ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು. ಭಾನುವಾರ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಒಪ್ಪಿಸಿದರು.

ಕ್ರೈಂ ಪಿಎಸ್ಸೈ ರವಿ, ಸಿಬ್ಬಂದಿ ಮುದ್ದುರಾಜ್, ಸುರೇಶ್ ಇದ್ದರು.