ಜಿಲ್ಲೆ

ಎತ್ತಿನಹೊಳೆ ಯೋಜನೆಗೆ ವಿರೋಧ, ಬೈರಗೊಂಡ್ಲು ಬಳಿ ಜಲಾಶಯ ನಿರ್ಮಾಣಕ್ಕೆ ರೈತರ ಅನುಮತಿ ಇಲ್ಲದೆಯೇ ಬಲವಂತವಾಗಿ ಸರ್ವೇ

ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹಿಸಲು ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕಾಗಿ ಮಾಡಿಕೊಂಡಿರುವ ಭೂಸ್ವಾಧೀನ ಹಾಗೂ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತಿಲ್ಲ. ಆದರೂ ಸರ್ಕಾರ ಸರ್ವೇಗೆ ಮುಂದಾಗಿದೆ. ಇದರಿಂದ ಜೀವನ ಬೀದಿಗೆ ಬೀಳಲಿದೆ ಎಂದು ಶ್ರೀರಾಮನಹಳ್ಳಿ ರೈತರು ಆತಂಕ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಅಧಿಕಾರ ಚುನಾಯಿತ ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ಇಲ್ಲ. ಎತ್ತಿನಹೊಳೆ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದಲ್ಲಿ ಭೂಸ್ವಾಧೀನ ಮಾಡಬಾರದು ಎಂದು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ. ಆದರೂ ಸರ್ಕಾರ ಇದನ್ನು ಪರಿಗಣಿಸುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ರೈತ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕೃತವಾಗಿ ನೋಟಿಸ್ ಜಾರಿಯಾಗಿಲ್ಲ: ಈ ಭಾಗದ ಯಾರೊಬ್ಬರಿಗೂ ಸರ್ಕಾರ ಅಧಿಕೃತವಾಗಿ ಭೂಸ್ವಾಧೀನ ಕುರಿತು ನೋಟಿಸ್ ಜಾರಿ ಮಾಡಿಲ್ಲ. ಆದರೆ, ಎತ್ತಿನಹೊಳೆ ಯೋಜನೆ ವಿಶೇಷ ಭೂಸ್ವಾಧೀನ ಕಚೇರಿಯಲ್ಲಿ ಮಾತ್ರ ಯಾವ ಗ್ರಾಮಗಳ, ಯಾವ ಸರ್ವೇ ನಂಬರ್‌ಗಳ ಭೂಮಿ ಸ್ವಾಧೀನಕ್ಕೆ ಒಳಪಡುತ್ತದೆ, ಯಾವೆಲ್ಲ ಗ್ರಾಮಗಳು ಮುಳುಗಡೆಯಾಗಲಿವೆ ಎಂಬ ನೀಲಿನಕ್ಷೆ ಪ್ರಕಟಿಸಲಾಗಿದೆ. ರೈತರ ಒಪ್ಪಿಗೆ, ಅನುಮತಿ ಇಲ್ಲದೆಯೇ ಬಲವಂತವಾಗಿ ಸರ್ವೇ ಮಾಡಲಾಗುತ್ತಿದೆ. ಸರ್ವೇಗೆ ಅಡ್ಡಿಪಡಿಸುವ ರೈತರ ವಿರುದ್ಧ ದೂರು ದಾಖಲಿಸಲು ಕಂದಾಯ ಅಧಿಕಾರಿಗಳು ಸೂಚಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ರೈತ ಗೋವಿಂದರಾಜು ಹೇಳಿದರು.

ನರಸಿಂಹಗೌಡ ಎಂಬ ರೈತ ಮಾತನಾಡಿ, ಜಲಾಶಯ ನಿರ್ಮಾಣಕ್ಕೆ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಕೊರಟಗೆರೆ ಭಾಗದಲ್ಲಿನ ಗ್ರಾಮಗಳ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಪೈಪ್‌ಲೈನ್ ಹಾಕುವಾಗ ಪ್ರತಿಭಟನೆ ನಡೆಸದೆ ಸುಮ್ಮನೆ ಇದ್ದ ಭಾಗದಲ್ಲಿನ ಗ್ರಾಮಗಳ ರೈತರ ಜಮೀನನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದನ್ನು ಆಧರಿಸಿ ಗ್ರಾಮಗಳನ್ನು ಮುಳುಗಡೆ ಮಾಡಲು ಹೊಸದಾಗಿ ಡಿಪಿಆರ್ (ಸಮಗ್ರ ಯೋಜನಾ ವರದಿ) ಸಿದ್ಧಪಡಿಸಲಾಗುತ್ತಿದೆ. ಈ ಬಗ್ಗೆ ಸರ್ವೇ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿರುವ ನಕ್ಷೆ ಲಭ್ಯವಾಗಿದೆ ಎಂದು ಹೇಳಿದರು.

ಕೊರಟಗೆರೆ ತಾಲೂಕಿನ ಗ್ರಾಮಗಳನ್ನು ಬಿಟ್ಟಿರುವಂತೆ ನಮ್ಮ ಗ್ರಾಮಗಳಲ್ಲೂ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯೇ ಅವೈಜ್ಞಾನಿಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ನೀಡಿರುವ ಹೇಳಿಕೆ ಸತ್ಯ ಎಂದರು.

ಪರ್ಯಾಯ ಮಾರ್ಗಗಳಿವೆ: ಸುಮಾರು 7 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸುವ ಬೈರಗೊಂಡ್ಲು ಜಲಾಶಯ ನಿರ್ಮಿಸದೆ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲು ಹಲವು ಪರ್ಯಾಯ ಮಾರ್ಗಗಳಿವೆ. ಕೊರಟಗೆರೆ ತಾಲೂಕಿನ ತೀತಾ ಡ್ಯಾಂ, ಮಾವತ್ತೂರು ಕೆರೆ, ದೊಡ್ಡಬಳ್ಳಾಪುರ ತಾಲೂಕಿನ ಬೃಹತ್ ಕೆರೆಗಳಲ್ಲಿ ನೀರು ಸಂಗ್ರಹಿಸಲು ಅವಕಾಶವಿದೆ. ಇದರಿಂದ ಅಂತರ್ಜಲ ಕೂಡ ಹೆಚ್ಚಾಗುತ್ತದೆ. ಕುಡಿಯುವ ನೀರಿನ ಬವಣೆಯೂ ನೀಗುತ್ತದೆ. ಒಂದೇ ಪ್ರದೇಶದಲ್ಲಿ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವ ತಾಪತ್ರಯವೂ ದೂರಾಗುತ್ತದೆ ಎಂದು ರೈತ ಮುತ್ತರಾಯಪ್ಪ ಸಲಹೆ ನೀಡಿದರು.

ರೈತರಾದ ಗಂಗಣ್ಣ, ರಾಮಣ್ಣ, ಕೆಂಪರಾಜು ಮತ್ತಿತರರು ಇದ್ದರು.