ಜಿಲ್ಲೆ

ಎತ್ತಿನಹೊಳೆ ಯೋಜನೆಗೆ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬ ಪ್ರತಿಭಟನೆ

ಹಾಸನ: ಎತ್ತಿನಹೊಳೆ ಯೋಜನೆಗಾಗಿ ಮನೆ ಮುಳುಗಡೆಯಾಗಿದ್ದು, ಪರಿಹಾರ ನೀಡಬೇಕಿದ್ದ ಅಧಿಕಾರಿಗಳು ಬೇರೆಯವರಿಗೆ ಪರಿಹಾರ ಒದಗಿಸಿ ದರ್ಪ ಮೆರೆಯುತ್ತಿದ್ದಾರೆಂದು ಆರೋಪಿಸಿ ಬೇಲೂರು ತಾಲ್ಲೂಕು ತಿರುಮಲನಹಳ್ಳಿ ಗ್ರಾಮದ ಶಿವಯ್ಯ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೇಲೂರು ತಾಲ್ಲೂಕು ಮಾದಿಹಳ್ಳಿ ಹೋಬಳಿ ತಿರುಮಲನಹಳ್ಳಿ ಗ್ರಾಮದ ಸರ್ವೆ ನಂ. 35ರಲ್ಲಿ ರಂಗಮ್ಮ ಕೋ ಟಿ.ರಾಮಯ್ಯ ಎಂಬುವವರ ಹೆಸರಿನಲ್ಲಿ ಜಮೀನು ಇದ್ದು, ಅವರ ಸಹೋದರರಾದ ಶಿವಯ್ಯ, ಚನ್ನಪ್ಪ, ಚನ್ನಬಸಯ್ಯ, ಮೋಹನ್‌ದಾಸ್ ಎಂಬುವವರು ಅನುಭವದಲ್ಲಿದ್ದಾರೆ. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ 5 ಎಕರೆ 24 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಮನೆಯ ಸಮೀಪದಲ್ಲೇ ಕಾಲುವೆ ಹಾದು ಹೋಗಿದ್ದು, ಭೂ ಪರಿಹಾರವನ್ನು ಚನ್ನಬಸಯ್ಯ ಹಾಗು ಮೋಹನ್‌ದಾಸ್ ಅವರಿಗೆ ಮಾತ್ರ ನೀಡಲಾಗಿದೆ ಎಂದರು.
ಸಂತ್ರಸ್ತರಾಗಿರುವ ಶಿವಯ್ಯ ಅವರಿಗೆ ಪರಿಹಾರ ನೀಡಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಚನ್ನಬಸಯ್ಯ ಅವರಿಗೆ ಪರಿಹಾರ ನೀಡಲಾಗಿದೆ ಎನ್ನುತ್ತಾರೆ. ಎತ್ತಿನಹೊಳೆ ಇಂಜಿನೀಯರ್ ಪ್ರಕಾಶ್ ಅವರನ್ನು ಖುದ್ದಾಗಿ ಭೇಟಿಯಾಗಿ ಕೇಳಿದಾಗ ಈ ವಿಷಯ ಇಲ್ಲಿಯೇ ಬಿಟ್ಟು ಬಿಡಿ ಇಲಾಖೆಯನ್ನು ಎದುರು ಹಾಕಿಕೊಂಡರೆ ವಾಸವಿರುವ ಮನೆಯೂ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಶಿವಯ್ಯ ಅವರ ಮನೆ ಪರಿಹಾರವನ್ನು ಬೇರೆಯವರಿಗೆ ನೀಡಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಹಾಗು ತಮಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸಂತ್ರಸ್ತರಾದ ರವೀಂದ್ರ, ಅಂಬರೀಷ್, ಹೇಮಲತಾ, ನಂದಿನಿ ಇತರರಿದ್ದರು.