ಪಾಂಡವಪುರ: ತಾಲೂಕಿನ ಬಳಘಟ್ಟ ಬಳಿ ಬುಧವಾರ ಗೂಡ್ಸ್ ಟೆಂಪೋ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತೊಂದು ಸ್ಥಳದಲ್ಲೇ ಮೃತಪಟ್ಟು, ಮತ್ತೊಂದು ಗಂಭೀರ ಗಾಯಗೊಂಡಿದೆ.
ನಾಗಮಂಗಲ ಕಡೆಯಿಂದ ಮೈಸೂರು ಕಡೆಗೆ ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ವೇಗವಾಗಿ ಚಲಿಸುತ್ತಿದ್ದ ಟೆಂಪೋ ಎದುರು ಬದಿಯಲ್ಲಿ ಬರುತ್ತಿದ್ದ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಕೃಷ್ಣೇಗೌಡ ಎಂಬುವರು ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಒಂದು ಎತ್ತಿನ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿತು. ಮತ್ತೊಂದು ತೀವ್ರ ಗಾಯಗೊಂಡಿದೆ. ಗಾಡಿಯಲ್ಲಿದ್ದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಒಂದು ಲಕ್ಷ ಪರಿಹಾರ: ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ವಾಹನ ಮಾಲೀಕರಿಗೆ ಕರೆ ಮಾಡಿ ರೈತರಿಗೆ ಪರಿಹಾರ ನೀಡುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಮಾಲೀಕ ಮೃತ ಎತ್ತಿಗೆ ಒಂದು ಲಕ್ಷ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.