ಕಿಕ್ಕೇರಿ: ದೇವರ ರೂಪದಲ್ಲಿ ಲಭಿಸಿರುವ ಮತದಾರರು ಹೊತ್ತ ಹರಕೆಯನ್ನು ನಾನು ತೀರಿಸುವುದು ಕರ್ತವ್ಯ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
ಸಾಸಲು ಕ್ಷೇತ್ರದ ಶ್ರೀ ಸೋಮೇಶ್ವರ, ಶ್ರೀ ಶಂಭುಲಿಂಗೇಶ್ವರ, ಕುದುರೆ ಮಂಡಮ್ಮ ದೇಗುಲಕ್ಕೆ ಇತ್ತೀಚೆಗೆ ಭೇಟಿ ನೀಡಿ, ದೇಗುಲದ ಆವರಣದಲ್ಲಿರುವ ಎಣ್ಣೆ ಗಾಣವನ್ನು ಎಳೆದ ಬಳಿಕ ಮಾತನಾಡಿ, ಶ್ರೀಕ್ಷೇತ್ರದಲ್ಲಿರುವ ಎಣ್ಣೆಗಾಣವಾಡಿಸಿ ಬಂದ ಎಳ್ಳೆಣ್ಣೆಯನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುವುದು ಎಂದು ಯಲಾದಹಳ್ಳಿ ಜೆಡಿಎಸ್ ಮುಖಂಡರು ಹರಕೆ ಹೊತ್ತಿದ್ದರು. ಈ ಬಾರಿ ಗೆದ್ದು ಶಾಸಕನಾಗಿರುವೆ. ಇದು ದೇವರು, ಮತದಾರರ ರೂಪದಲ್ಲಿ ಕೊಟ್ಟಿರುವ ವರವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರು ಗಾಣಕ್ಕೆ ಎಳ್ಳನ್ನು ಹಾಕಿ ಶಾಸಕರೊಂದಿಗೆ ಗಾಣವನ್ನು ಎಳೆದರು. ಬಂದ ಎಳ್ಳೆಣ್ಣೆಯನ್ನು ದೇವರಿಗೆ ಅರ್ಪಿಸಿದರು. ಈ ಬಾರಿ ಮಳೆ ಕೈಕೊಟ್ಟಿದೆ. ಸಕಾಲಕ್ಕೆ ಮಳೆ ಬರಲಿ. ರೈತರ ಸಂಕಷ್ಟವನ್ನು ದೂರ ಮಾಡಲಿ, ಕೆರೆಕಟ್ಟೆ ತುಂಬಿ ಜನ, ಜಾನುವಾರುಗಳಿಗೆ ಬಂದಿರುವ ಜಲ ತತ್ವಾರ ದೂರ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ತಾಲೂಕು ಅಧ್ಯಕ್ಷ ಜಾನಕೀರಾಮು, ಯಲಾದಹಳ್ಳಿ ಮಹದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಶೇಖರ್, ಆನೆಗೊಳ ಶೇಖರ್, ಸಾಸಲು, ಕೊಪ್ಪಲು, ಯಲಾದಹಳ್ಳಿ ಗ್ರಾಮಸ್ಥರು ಹಾಜರಿದ್ದರು.