ಜಿಲ್ಲೆ

ಎಣ್ಣೆಕಾಳು ಬೆಳೆಯಲು ಪ್ರೋತ್ಸಾಹ ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

ತುಮಕೂರು: ಎಣ್ಣೆಕಾಳು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಜಿಲ್ಲೆಯಿಂದಲೇ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಲಭ್ಯತೆ ಹಾಗೂ ಪೂರ್ವ ಸಿದ್ಧತೆ ಕುರಿತು ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿತ್ತನೆ ಬೀಜಗಳನ್ನು ವಿತರಿಸುವಾಗ ಗುಣಮಟ್ಟ ಖಾತ್ರಿಪಡಿಸಿಕೊಂಡೇ ರೈತರಿಗೆ ಪೂರೈಸಬೇಕು. ಕಳಪೆ ಬಿತ್ತನೆ ಬೀಜ ವಿತರಣೆಯಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತರಾಗಿರಬೇಕು ಎಂದು ತಾಕೀತು ಮಾಡಿದರು.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬಹುಬೆಳೆ ಬೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈತರಿಗೆ ಉಚಿತವಾಗಿ ದ್ವಿದಳ ಧಾನ್ಯಗಳ 8 ಸಾವಿರ ಕಿಟ್ ನೀಡಿದ್ದು, ಏಕದಳ ಧಾನ್ಯ ಬೆಳೆ ಬೆಳೆಯುವ ರೈತರಿಗೆ ವಿತರಿಸಿ ಸಮಗ್ರ ಕೃಷಿ ಕೈಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆಯಿತ್ತರು.

ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ದಿನವಿಡೀ ತೆರೆಯಬೇಕು. ಯಾವುದಕ್ಕೂ ನಿಬರ್ಂಧ ಹೇರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ತಿಳಿಹೇಳಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಶೇ.85 ವಾಡಿಕೆ ಮಳೆಯಾಗಿಛ್ಛಛ್ಠ, ಕೃಷಿ ಚಟುವಟಿಕೆ ಮತ್ತು ಬಿತ್ತನೆ ಆರಂಭವಾಗಿದೆ. ರೈತ ಸಂಪರ್ಕ ಕೇಂದ್ರದಿಂದ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ವಿತರಣೆಗೂ ಕ್ರಮ ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

ಶಾಸಕರಾದ ಎಂ.ವಿ.ವೀರಭದ್ರಯ್ಯ, ಜಿ.ಬಿ. ಜ್ಯೋತಿಗಣೇಶ್, ಮಸಾಲ ಜಯರಾಂ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ತಿಪ್ಪೇಸ್ವಾಮಿ, ಚಿದಾನಂದ್‌ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಸ್‌ಪಿ ಡಾ.ಕೆ.ವಂಶಿಕೃಷ್ಟ ಇದ್ದರು.

ಸಿ.ಎಂ.ಉದಾಸಿಗೆ ಸಂತಾಪ: ಮಾಜಿ ಸಚಿವ ಸಿ.ಎಂ.ಉದಾಸಿ ನಿಧನ ಹಿನ್ನೆಲೆಯಲ್ಲಿ ಸಭೆ ಆರಂಭದಲ್ಲೇ ಸಂತಾಪ ಸೂಚಿಸಲಾಯಿತು. ಸಚಿವ ಜೆ.ಸಿ.ಮಾಧುಸ್ವಾಮಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿ ಹಾಜರಿದ್ದವರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆ ಕಡಿಮೆಯಾಗಿದೆ. ಎಣ್ಣೆಕಾಳು ಬಿತ್ತನೆ ಬೀಜಕ್ಕೆ ರೈತರನ್ನು ಪ್ರೇರೇಪಿಸಬೇಕು. ಶೇಂಗಾ ಬಿಟ್ಟರೆ ಬೇರೆ ಎಣ್ಣೆಬೀಜಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ. ಸೂರ್ಯಕಾಂತಿ, ಎಳ್ಳು, ಅರಳು ಮೊದಲಾದ ಎಣ್ಣೆಕಾಳುಗಳನ್ನು ಬೆಳೆಯಲು ಆದ್ಯತೆ ನೀಡಬೇಕು. ಜತೆಗೆ ಬಹುಬೆಳೆಗೆ ಆದ್ಯತೆ ಜತೆಗೆ ವೈಜ್ಞಾನಿಕ ಆಧಾರದ ಮೇಲೆಯೇ ಬೆಳೆ ಬೆಳೆಯುವುದಕ್ಕೆ ಒತ್ತು ಕೊಡಬೇಕು ಎಂದು ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.

ಚೀನಾದಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಈವರೆಗೂ ಚೀನಾದಿಂದ ಬಿತ್ತನೆ ಬೀಜ ವಿತರಣೆ ಸಂಬಂಧ ಯಾವುದೇ ಪ್ರಕರಣ ವರದಿಯಾಗಿಲ್ಲ. ಎಣ್ಣೆಕಾಳು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುವುದು. ಅಂತೆಯೇ ಸಿರಿ ಧಾನ್ಯ ಬೆಳೆಯಲು ಪ್ರೋತ್ಸಾಹ ಧನವಾಗಿ 10 ಸಾವಿರ ರೂ., ನೀಡಲಾಗುತ್ತಿದೆ. ರಾಜ್ಯದಲ್ಲಿ 163245.87 ಬಿತ್ತನೆ ಬೀಜ ಹಾಗೂ 1224650 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಬಿ.ಸಿ.ಪಾಟೀಲ್ ಕೃಷಿ ಸಚಿವ