ಕೊಲೆಯಾದ ಮಂಜುನಾಥ 
ಜಿಲ್ಲೆ

ಎಣ್ಣೆ ಕೊಡಿಸು ಭಾವ ಎಂದಿದ್ದಕ್ಕೆ ಕೊಲೆ

ನಾಗಮಂಗಲ: ಎಣ್ಣೆ ಕೊಡಿಸುವ ಭಾವ ಎಂದು ಸದಾ ಪೀಡಿಸುತ್ತಿದ್ದ ಕಾರಣಕ್ಕೆ ಕುಡಿದ ಅಮಲಿನಲ್ಲಿ ತನ್ನ ಭಾವಮೈದನನ್ನು ಭರ್ಜಿಯಿಂದ ಇರಿದು ಕೊಲೆ ಮಾಡಿದ್ದಾನೆ.
ಸುಭಾಷ್‌ನಗರದ ವಾಸಿ ಮಂಜುನಾಥ ಅಲಿಯಾಸ್ ಡಿಂಗ್ರಿ ಮಂಜ (25) ಕೊಲೆಯಾದವ. ಈತನ ಭಾವ ಆನಂದ(33) ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿ.
ಕೊಲೆಯಾಗಿರುವ ಮಂಜುನಾಥ ತನ್ನ ಭಾವ ಆನಂದನನ್ನು ಕಂಡಾಗಲೆಲ್ಲ ಅವ್ಯಾಚ್ಯ ಶಬ್ದಗಳಿಂದ ನಿಂದಿಸುವ ಜತೆಗೆ ಕುಡಿಯಲು ಮದ್ಯ ಕೊಡಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಬೇಸತ್ತ ಆನಂದ ಕುಡಿದ ಅಮಲಿನಲ್ಲಿ ಶನಿವಾರ ತಡರಾತ್ರಿ 12 ಗಂಟೆ ಸಮಯದಲ್ಲಿ ಪಟ್ಟಣದ ಟಿ.ಬಿ.ಬಡಾವಣೆಯ ಸುಭಾಷ್ ನಗರದಲ್ಲಿ ಮಂಜುನಾಥನಿಗೆ ಹಂದಿಗೆ ಚುಚ್ಚುವ ಭರ್ಜಿಯಿಂದ ಎದೆ ಮತ್ತು ಬೆನ್ನಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಆರೋಪಿ ಆನಂದ ತಲೆಮರೆಸಿಕೊಂಡಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಂಜುನಾಥನ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಲಕ್ಷ್ಮೀನಾರಾಯಣಪ್ರಸಾದ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್‌ಐ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಮಂಜುನಾಥ