ಜಿಲ್ಲೆ

ಎಡಮಂಗಲದಲ್ಲಿ ಭೀಕರ ಬಿರುಗಾಳಿಗೆ ಹಾನಿ : ಲಕ್ಷಾಂತರ ರೂ. ನಷ್ಟ : ಮನೆಗಳ ಮೇಲೆ ಬಿದ್ದ ಮರ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಬೀಸಿದ ಭೀಕರ ಬಿರುಗಾಳಿಗೆ ಅಪಾರ ಹಾನಿ ಸಂಭವಿಸಿದೆ.

ಒಂದು ಭಾಗದಿಂದ ಆರಂಭಗೊಂಡ ಸುಳಿಗಾಳಿ ಮಾದರಿಯ ಬಿರುಗಾಳಿ ಕೃಷಿ ತೋಟ, ಮನೆ, ಕಟ್ಟಡಗಳಿಗೆ ಹಾನಿ ಉಂಟು ಮಾಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಹಲವಾರು ಮನೆಗಳು ನಾಶಗೊಂಡಿದ್ದು ಅದೃಷ್ಟವಶಾತ್ ಜೀವ ಹಾನಿ ಸಂಭವಿಸಿಲ್ಲ.

12ಕ್ಕೂ ಅಧಿಕ ಮನೆಗಳಿಗೆ ಹಾನಿ: ಸವಿತಾ ಮುಳಿಯ ಎಂಬುವರ ಮನೆ ಸಂಪೂರ್ಣ ಹಾನಿಗೊಂಡಿದೆ. ವಸಂತ ಅಳಕ್ಕೆ ಎಂಬುವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದಿದೆ. ಅಳಕ್ಕೆ ರಾಧಮ್ಮ ಎಂಬುವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ಗುಡ್ಡಪ್ಪ ಗೌಡ ಪಾದೆ ಅವರ ಮನೆ, ಹಟ್ಟಿ, ಕೊಟ್ಟಿಗೆಗೆ ಮರ ಬಿದ್ದಿದೆ. ಪ್ರಭಾಕರ ಪಾದೆ ಎಂಬುವರ ವಾಸ್ತವ್ಯದ ಮನೆಗೆ ಮರ ಬಿದ್ದು ನಷ್ಟ ಸಂಭವಿಸಿದೆ. ಹೊನ್ನಪ್ಪ ಗೌಡ ಎಂಬುವರ ಮನೆಗೆ ಮರ ಬಿದ್ದಿದೆ. ಬಾಬು ನಾಯ್ಕ ಮುಳಿಯ ಎಂಬುವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಶೀಟು ಹಾನಿಗೊಂಡಿದೆ. ನಾರಾಯಣ ನಾಯ್ಕ ಮುಳಿಯ ಎಂಬುವರ ಕೊಟ್ಟಿಗೆ, ಮನೆಗೆ ಹಾನಿಯಾಗಿದೆ. ಸುಂದರ ಗೌಡ ಎಡಮಂಗಲ ವಾಸ್ತವ್ಯ ಮನೆಗೆ ಹಾನಿ ಸಂಭವಿಸಿದೆ. ಸರೋಜಿನಿ ಮುಳಿಯ ಅವರ ಮನೆಗೆ ಹಾನಿಯಾಗಿದೆ. ಜಯೇಂದ್ರ ಎಂಬುವರ ಮನೆಗೆ, ಅಶೋಕ್ ಮುಳಿಯ ಅವರ ಮನೆಗೆ ಹಾನಿಯಾಗಿದೆ.

ಗ್ರಾಪಂ ಸಭಾಭವನಕ್ಕೆ ಹಾನಿ: ಭೀಕರ ಬಿರುಗಾಳಿಗೆ ಎಡಮಂಗಲ ಗ್ರಾಪಂ ಸಭಾಭವನದ ಮೇಲ್ಛಾವಣಿಯ ಶೀಟು ಹಾರಿ ಹೋಗಿದೆ. ಗಾಳಿಯ ಭೀಕರತೆಗೆ ಮೇಲ್ಛಾವಣಿ ಶೀಟು 200ರಿಂದ 500 ಮೀ. ದೂರಕ್ಕೆ ಹೋಗಿ ಬಿದ್ದು ಮನೆಯ ಸಿಟೌಟ್‌ಗೆ ಹಾನಿಯಾಗಿದೆ. ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಮೇಲ್ಛಾವಣಿಗೂ ಹಾನಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದೆ. ಎಡಮಂಗಲ ಪೇಟೆಯಲ್ಲಿ ಹಲವು ಅಂಗಡಿ ಕಟ್ಟಡಗಳಿಗೆ ಹಾನಿ ಸಂಭವಿಸಿದೆ.

ಘಟನಾ ಸ್ಥಳಗಳಿಗೆ ಎಡಮಂಗಲ ಗ್ರಾಪಂ ಅಧ್ಯಕ್ಷ ರಾಮಣ್ಣ ಜಾಲ್ತಾರು, ಕಾರ್ಯದರ್ಶಿ ಗುರುವ ಎಸ್., ಗ್ರಾಮ ಸಹಾಯಕ ನಾರಾಯಣ, ಸದಸ್ಯರಾದ ನಾಗೇಶ್ ಮರೋಳಿ, ದುಷ್ಯಂತ್ ದೋಣಿಮನೆ, ಸುಮಾ ನೂಚಿಲ, ವನಿತಾ ಕಾಯಿತ್ತಿಮಾರು, ಗೀತಾ ಬಲ್ಕಾಡಿ, ಮಾಧವ ಡೆಮಾಯಿಲ, ನವೀನ್ ಕರಿಂಬಿಲ, ರೇವತಿ ಎಂಜಿರೋ, ಲೀಲಾವತಿ ಉಚ್ಚಮೂಲೆ, ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಪಂ ಸಭಾಭವನದ ಮೇಲ್ಛಾವಣಿಗೆ ಹಾನಿಯಾಗಿದೆ.

ಕೃಷಿ ತೋಟ ಧ್ವಂಸ

ಗ್ರಾಮದ ವಿವಿಧೆಡೆ ಕೃಷಿ ತೋಟಗಳಿಗೂ ಪರಿಣಾಮ ಬೀರಿದ್ದು ಒಂದುವರೆ ಸಾವಿರಕ್ಕೂ ಅಧಿಕ ಅಡಕೆ ಮರ, 50ಕ್ಕೂ ಅಧಿಕ ತೆಂಗು, ಹಲವಾರು ಇತರ ಕೃಷಿ, ಮರಗಳು ಧರೆಗುರುಳಿವೆ. 20ಕ್ಕೂ ಅಧಿಕ ವಿದ್ಯುತ್ ಕಂಬ, ಲೈನ್‌ಗಳಿಗೆ ಹಾನಿಯಾಗಿದೆ. ಹಲವೆಡೆ ಮರ, ಮರದ ಗೆಲ್ಲು ಬಿದ್ದು ಹಾನಿಯಾಗಿದೆ.