ಜಿಲ್ಲೆ

ಎಟಿಎಂ ಕಾರ್ಡ್ ಬದಲಿಸಿ ವಂಚನೆ

 ಇಬ್ಬರನ್ನು ಬಂಧಿಸಿದ ಬಾಗೇಪಲ್ಲಿ ಪೊಲೀಸರು | ವಿವಿಧ ಬ್ಯಾಂಕ್‌ಗಳ 38 ಕಾರ್ಡ್, ನಗದು ವಶ

 ಬಾಗೇಪಲ್ಲಿ : ಹಣ ಪರಿಶೀಲಿಸಿಕೊಡುವ ನೆಪದಲ್ಲಿ ಗ್ರಾಹಕರ ಎಟಿಎಂ ಕಾರ್ಡ್ ಪಡೆದು ನಕಲಿ ಕಾರ್ಡ್ ಕೊಟ್ಟು ವಂಚಿಸುತ್ತಿದ್ದ ಇಬ್ಬರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿ ವಿವಿಧ ಬ್ಯಾಂಕ್‌ಗಳ 38 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ನಿವಾಸಿ ತಿಮ್ಮರಾಯಪ್ಪ (40), ಮಾಲೂರಿನ ಮಾರುತಿ ಬಡವಾಣೆ ನಿವಾಸಿ ಟಿ.ಮಂಜುನಾಥ (38) ಬಂಧಿತರು.

ಬಂಧಿತರ ವಿರುದ್ದ ಬಾಗೇಪಲ್ಲಿ ಠಾಣೆಯಲ್ಲಿ 2 ಪ್ರಕರಣ, ಚಿಂತಾಮಣಿ ನಗರ ಠಾಣೆಯಲ್ಲಿ 1, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಕಲ್ಲೂರು ಠಾಣೆಯಲ್ಲಿ 1 ಹಾಗೂ ವಿ.ಕೋಟ ಠಾಣೆಯಲ್ಲಿ 2 ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಮಾರ್ಗದರ್ಶನದಂತೆ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ, ಇನ್‌ಸ್ಪೆಕ್ಟರ್‌ಗಳಾದ ಪಿ.ನಾಗಮ್ಮ, ಮುನಿರತ್ನಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 1.05 ಲಕ್ಷ ರೂ., ಎರಡು ದ್ವಿಚಕ್ರ ವಾಹನ, ವಿವಿಧ ಬ್ಯಾಂಕ್‌ಗಳ 38 ಎಟಿಎಂ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ

ಬಾಗೇಪಲ್ಲಿಯ 19ನೇ ವಾರ್ಡ್‌ನ ಶಿಕ್ಷಕಿ ನಾಸೀಮಾ ಸುಲ್ತಾನ ಅವರು ಜೂ.15ರಂದು ಮಧ್ಯಾಹ್ನ ಪಟ್ಟಣದ ಡಿವಿಜಿ ರಸ್ತೆಯಲ್ಲಿರುವ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾಗ, ಬ್ಯಾಲೆನ್ಸ್ ಹಣ ಚೆಕ್ ಮಾಡಿಕೊಡುವ ನೆಪ ಹೇಳಿ ಎಟಿಎಂ ಕಾರ್ಡ್ ಪಡೆದ ಆರೋಪಿಗಳು, ಅದನ್ನು ಬದಲಾಯಿಸಿ ಮತ್ತೊಂದು ಎಟಿಎಂ ಕಾರ್ಡ್ ಕೊಟ್ಟು ಪರಾರಿಯಾಗಿದ್ದರು. ಜೂ.17 ಮತ್ತು 20ರಂದು ಶಿಕ್ಷಕಿಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರೋಪಿಗಳು ಎಟಿಎಂನಲ್ಲಿ ಡ್ರಾ ಮಾಡಿದ್ದಾರೆ. ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬರುತ್ತಿದ್ದಂತೆ ಗಾಬರಿಗೊಂಡು ಶಿಕ್ಷಕಿ, ಬಾಗೇಪಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆಗಿಳಿದಿದ್ದ ಪೊಲೀಸರು ಅ.25ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಮುನಿರತ್ನಂ, ಸಿಬ್ಬಂದಿಗಳಾದ ಧನಂಜಯ ಕುಮಾರ್, ಸಾಗರ್, ಕೃಷ್ಣಪ್ಪ, ವೆಂಕಟರವಣ, ಸುರೇಶ್, ಮೋಹನ್ ಕುಮಾರ್, ಅನಿಲ್‌ಕುಮಾರ್, ಶಂಕರಪ್ಪ ಕಿರವಾಡಿ, ಎನ್.ಜಯಣ್ಣ, ಡಿಪಿಒ ರವಿಕುಮಾರ್, ಮುನಿಕೃಷ್ಣ ಭಾಗವಹಿಸಿದ್ದರು.