ಜಿಲ್ಲೆ

ಎಜುಕೇಷನ್ ಎಕ್ಸ್‌ಪೋದಿಂದ ಸುವರ್ಣ ಅವಕಾಶ: ಡಾ.ಎಚ್.ಬಸವನಗೌಡಪ್ಪ ಅಭಿಮತ

ಮೈಸೂರು: ವಿದ್ಯಾರ್ಥಿಗಳು ವೈವಿಧ್ಯಮಯ ಕೋರ್ಸ್‌ಗಳ ಕುರಿತು ಅರಿತುಕೊಳ್ಳಲು ‘ವಿಜಯವಾಣಿ ಶೈಕ್ಷಣಿಕ ಮೇಳ’ ಸುವರ್ಣ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ ಹೇಳಿದರು.

ಎಜುಕೇಷನ್ ಎಕ್ಸ್‌ಪೋ-2025’ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದೀಗ ಹತ್ತಾರು ಕೋರ್ಸ್‌ಗಳು, ಕಾಲೇಜುಗಳಿವೆ. ಜಾಹೀರಾತು ನೀಡಿ ಪ್ರಚಾರ ಮಾಡಿದರೂ ಈ ಕುರಿತು ವಿದ್ಯಾರ್ಥಿಗಳು, ಪಾಲಕರಿಗೂ ಅರ್ಥವಾಗಲ್ಲ.

ಇಲ್ಲಿಗೆ ಖುದ್ದಾಗಿ ಭೇಟಿ ನೀಡಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರೆ ಮನವರಿಕೆಯಾಗಲಿದೆ. ಇಂತಹವೊಂದು ಅವಕಾಶ ಕಲ್ಪಿಸಿಕೊಟ್ಟಿರುವ ವಿಜಯವಾಣಿ ಕಾರ್ಯ ಶ್ಲಾಘನೀಯ. ಇದು ಸಮಾಜಕ್ಕೆ ಉತ್ತಮ ಸೇವೆಯಾಗಿದೆ ಎಂದು ಬಣ್ಣಿಸಿದರು.

ಹಿಂದೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ 4-5 ಕೋರ್ಸ್‌ಗಳಿದ್ದವು. ಈಗ ನೂರಾರು ಕೋರ್ಸ್‌ಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕಲಿಕಾ ಉದ್ದೇಶ ವ್ಯಾಪಕವಾಗಿ ವಿಸ್ತಾರವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ತಮಗೆ ಬೇಕಾದ ಕೋರ್ಸ್‌ಗಳ ಬಗ್ಗೆ ಜಾಗೃತಿ ಹೊಂದುವುದು ಅಗತ್ಯವಾಗಿದೆ. ಇದಕ್ಕೆ ಈ ಮೇಳ ಸಹಕಾರಿಯಾಗಲಿದೆ ಎಂದರು.

ಶಿಕ್ಷಣ ವ್ಯವಸ್ಥೆ ಬಹಳಷ್ಟು ಬದಲಾಗಿದೆ. ಆನ್‌ಲೈನ್ ಮೂಲಕ ತ್ವರಿತಗತಿಯಲ್ಲಿ ಮಾಹಿತಿ ದೊರೆಯುತ್ತಿದೆ. ಕೃತಕಬುದ್ಧಿಮತ್ತೆ(ಎಐ), ಚಾರ್ಟ್‌ಜಿಪಿಟಿದಂತಹ ತಂತ್ರಜ್ಞಾನದಿಂದ ಊಹೆ ಮಾಡಲಾರದಂತಹ ಉತ್ತರ, ಮಾಹಿತಿ ದೊರೆಯುತ್ತಿದೆ. ಇದು ಶಿಕ್ಷಣಕ್ಕೆ ಪೂರಕವಾಗಿಯೇ ಇರಬೇಕು ಹೊರತು ಮಾರಕವಾಗದಂತೆ ನೋಡಿಕೊಳ್ಳಬೇಕು ಎಂದರು.

ಕರೊನಾ ಬಳಿಕ ಡಿಜಿಟಿಲ್ ಮಾಧ್ಯಮ ಬಳಕೆ ಹೆಚ್ಚಾಗಿದೆ. ವ್ಯಸನವಾಗಿರುವ ಮೊಬೈಲ್ ಅನ್ನು ಅನಗತ್ಯ ಬಳಕೆ ವಿಪರೀತವಾಗಿದೆ. ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ, ಏಕಾಗ್ರತೆ ಕೊರತೆ ಉಂಟು ಮಾಡುತ್ತಿದೆ.

ಹೀಗಾಗಿ, ಮೊಬೈಲ್‌ನಿಂದ ವಿದ್ಯಾರ್ಥಿಗಳನ್ನು ದೂರ ಇಟ್ಟು ಶೈಕ್ಷಣಿಕ ಪ್ರಗತಿಯನ್ನು ಹೇಗೆ ಸಾಧಿಸಬೇಕು ಎಂಬುದರ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ ಎಂದರು.

ವಿಜಯವಾಣಿಯಿಂದ ಉತ್ತಮ ಕೆಲಸ: ಶಾಲಾ ಶಿಕ್ಷಣ ಇಲಾಖೆ ಡಿಡಿ ಎಸ್.ಟಿ.ಜವರೇಗೌಡ

ಮತ್ತೊಬ್ಬ ಅತಿಥಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಮಾತನಾಡಿ, ಕಾಲೇಜು ಹಂತದಲ್ಲಿ ಯಾವ ಕೋರ್ಸ್ ತೆಗೆದುಕೊಳ್ಳಬೇಕು.

ಯಾವ ಕಾಲೇಜಿಗೆ ಸೇರಿಬೇಕು ಎಂಬುದರ ಕುರಿತು ವಿದ್ಯಾರ್ಥಿ, ಪಾಲಕರ ವಲಯದಲ್ಲಿ ಗೊಂದಲ ಇದೆ. ಇದನ್ನು ವಿಜಯವಾಣಿ ಶಿಕ್ಷಣ ಮೇಳ ದೂರ ಮಾಡಲಿದೆ. ಇದು ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಹೊಸ ಕೋರ್ಸ್ ಕುರಿತು ಅಷ್ಟಾಗಿ ಜಾಗೃತಿ ಇರುವುದಿಲ್ಲ. ಇಂತಹ ಮಕ್ಕಳು ಇಲ್ಲಿಗೆ ಭೇಟಿ ನೀಡಿದಾಗ ಯಾವ ವಿಷಯ ಆಯ್ದುಕೊಳ್ಳಬೇಕು ಎಂಬುದು ಅರಿವಿಗೆ ಬರುತ್ತದೆ. ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗೂ ಪೂರಕವಾಗಲಿದೆ ಎಂದರು.

ವಿಜಯವಾಣಿ ಪತ್ರಿಕೆಯಲ್ಲಿ ನಿತ್ಯ ಪ್ರಕಟವಾಗುವ ಸುದ್ದಿಗಳು, ಮಾಹಿತಿಗಳು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಿದೆ ಎಂದರು.