ನಂಜನಗೂಡು: ದಲಿತ ಸಮುದಾಯದ ಹಿರಿಯ ರಾಜಕಾರಣಿ ತಿ.ನರಸೀಪುರ ಕ್ಷೇತ್ರದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡುವಂತೆ ಒತ್ತಾಯಿಸಿ ಗುರುವಾರ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಸಂಘಟಿತರಾದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಕೆಲವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಸಲುವಾಗಿ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಪರಿಣಾಮಕಾರಿಯಾಗಿ ಕಾಂಗ್ರೆಸ್ ಪರ ಕೆಲಸ ನಿರ್ವಹಿಸುವಂತೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೋಡಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ನೀಡಿಲ್ಲ ಎಂಬ ಅಸಮಾಧಾನವನ್ನು ಹೋಗಲಾಡಿಸಿ ಮುನಿಸಿಕೊಂಡಿದ್ದ ದಲಿತ ಸಮುದಾಯದ ಮತದಾರರ ಮನವೊಲಿಸಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ದಲಿತ ಸಮುದಾಯದ ಮತದಾರರು ಭಾರಿ ಪ್ರಮಾಣದಲ್ಲಿ ಬೆಂಬಲ ನೀಡಿರುವುದೇ ಕಾರಣವಾಗಿದೆ. ಹೀಗಾಗಿ ದಲಿತ ಸಮುದಾಯದ ಕನಿಷ್ಠ 10 ಮಂದಿಗೆ ಸಚಿವ ಸ್ಥಾನ ನೀಡಬೇಕು. ಮೈಸೂರು ಭಾಗದ ಅಭಿವೃದ್ಧಿ ಮತ್ತು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ಉಪ ವಿಭಾಗೀಯ ಸಂಚಾಲಕ ಮಂಜು ಶಂಕರಪುರ, ತಾಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಕೃಷ್ಣಮೂರ್ತಿ ಬಸವಟ್ಟಿಗೆ, ವಳಿಯಪ್ಪ, ಮಹದೇವಸ್ವಾಮಿ, ಪ್ರಮೋದ್, ಗಜೇಂದ್ರ, ಬಸವರಾಜು, ಸುರೇಶ್, ಸಿದ್ದರಾಜು, ಮರಿಸ್ವಾಮಿ, ಕವಲಂದೆ ಗುರು ಭಾಗವಹಿಸಿದ್ದರು.