ಹಾಸನ : ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ಪರಿಶೀಲನೆ ವೇಳೆ ಯಾವುದೇ ಲೋಪದೋಷ ಕಂಡು ಬಂದಿಲ್ಲ ಎಂದು ಎಚ್‌ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ತಿಳಿಸಿದರು.
ಮಾರ್ಚ್ 31 ಮತ್ತು ಏಪ್ರಿಲ್ 1ರಂದು ಐಟಿ ಅಧಿಕಾರಿಗಳ ತಂಡ ದಾಖಲೆ ಶೋಧ, ಬ್ಯಾಲೆನ್ಸ್ ಶೀಟ್ ಅವಲೋಕನ ಸೇರಿ ಎಲ್ಲಾ ರೀತಿಯಲ್ಲೂ ಪರಿಶೀಲನೆ ನಡೆಸಿತು. ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ನೀಡಿದರು. ಪರಿಶೀಲನೆ ವೇಳೆ ಯಾವುದೇ ಅಕ್ರಮ ನಡೆದಿರುವುದು ಅವರಿಗೆ ಸಿಕ್ಕಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1953ರಲ್ಲಿ 8.53 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್, ಹಾಲಿ 34 ಶಾಖೆ ಹೊಂದಿದೆ. ಮಾರ್ಚ್ ಅಂತ್ಯಕ್ಕೆ 1638.98 ಕೋಟಿ ರೂ. ಠೇವಣಿ, 83.69 ಕೋಟಿ ರೂ. ಷೇರು ಬಂಡವಾಳ ಹಾಗೂ 2207.67 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸದ್ಯ 1836.19 ಕೋಟಿ ಸಾಲ ವಿತರಿಸಲಾಗಿದೆ. ಜಿಲ್ಲೆಯ ರೈತರಿಗೆ ಹಾಗೂ ಗ್ರಾಹಕರಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಅಷ್ಟೇ ಅಲ್ಲದೇ ಕಳೆದ 20 ವರ್ಷಗಳಿಂದ ಲಾಭ ಗಳಿಸುತ್ತಲೇ ಬಂದಿದ್ದು, 2022-2023ನೇ ಸಾಲಿಗೆ 13.52 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.
ಬ್ಯಾಂಕ್ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲಸೌಲಭ್ಯ ನೀಡುತ್ತಿದ್ದು, ಜಿಲ್ಲೆಯ 211 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 1,94,921 ರೈತರಿಗೆ ಶೂನ್ಯ ದರದಲ್ಲಿ ಅಲ್ಪಾವಧಿ ಬೆಳೆ ಸಾಲವಾಗಿ 1,089.09 ಕೋಟಿ ರೂ. ನೀಡಲಾಗಿದೆ. ಮತ್ತು 1414 ರೈತರಿಕೆ ಮಧ್ಯಮಾವಧಿ ಸಾಲವಾಗಿ 102.77 ಕೋಟಿ ರೂ., ಕೃಷಿ ವಲಯಕ್ಕೆ ಒಟ್ಟು 1191.86 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.
ಹಾಗೆಯೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಉಪಯೋಗ ಸೇವಾ ಸಹಕಾರ ಸಂಘಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವು ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಗೋದಾಮು ನಿರ್ಮಾಣ, ಕೃಷಿ ಯಂತ್ರೋಪಕರಣಗಳ ಖರೀದಿ ಹಾಗೂ ಇತರೆ ಉದ್ದೇಶಕ್ಕಾಗಿ 12.96 ಕೋಟಿ ರೂ. ನೀಡಲಾಗಿದೆ ಮತ್ತು ಗೃಹ ವಾಣಿಜ್ಯ, ಕಟ್ಟಣ ನಿರ್ಮಾಣ, ಖರೀದಿ, ನಿವೇಶನ ಖರೀದಿ/ಅಡಮಾನ ಇತರೆ ಕೃಷಿಯೇತರ ಉದ್ದೇಶಗಳಿಗೆ 608.84 ಕೋಟಿ ರೂ. ಸಾಲ ನೀಡಿದೆ ಎಂದರು.
ನಬಾರ್ಡ್ ಹಾಗೂ ರಾಜ್ಯ ಸರ್ಕಾರ ರೂಪಿಸಿದ ಸ್ವ ಸಹಾಯ ಗುಂಪುಗಳ ರಚನೆ ಹಾಗೂ ಬ್ಯಾಂಕ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬ್ಯಾಂಕಿನಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಬ್ಯಾಂಕಿನ ಶಾಖೆಗಳು ಹಾಗೂ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆಯಲ್ಲಿ 18,200 ಸ್ವ ಸಹಾಯ ಗುಂಪುಗಳನ್ನು ರಚಿಸಿದೆ. ಈ ಪೈಕಿ ಬಹುತೇಕ ಗುಂಪುಗಳು ಸಾಲ ಸೌಲಭ್ಯ ಪಡೆದಿದ್ದು, 4215 ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ 116.94 ಕೋಟಿ ರೂ. ಸಾಲ ನೀಡಲಾಗಿದೆ. ನಮ್ಮ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದ್ದು, ಆರ್ಥಿಕವಾಗಿ ಸದೃಢವಾಗಿದ್ದು ನಿರಂತರ ಜನ ಹಾಗೂ ರೈತ ಸೇವೆಯಲ್ಲಿ ತೊಡಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕರಾದ ಚನ್ನೇಗೌಡ, ಜಗನ್ನಾಥ್, ಬಿದರಕೆರೆ ಜಯರಾಂ, ಗಿರೀಶ್ ಚನ್ನವೀರಪ್ಪ, ಹೊನ್ನವಳ್ಳಿ ಸತೀಶ್ ಇದ್ದರು.