ಚನ್ನಪಟ್ಟಣ: ಇವತ್ತಿನ ಕಾರ್ಯಕ್ರಮ ನನಗೆ ಸಮಾಧಾನ ತರಲಿಲ್ಲ. ಕನಕಪುರದಲ್ಲಿ ಬಹಳ ಅಪ್‌ಡೇಟ್ ಆಗಿ ಕಾರ್ಯಕ್ರಮ ನಡೆಯುತ್ತದೆ. ಆದರೆ, ಇಲ್ಲಿ ಸರಿಯಾದ ಕ್ರೀಡಾಂಗಣ ಇಲ್ಲ. ಈ ತಾಲೂಕನ್ನು ಸರಿಯಾದ ರೀತಿ ೈನ್‌ಟ್ಯೂನ್ ಮಾಡಬೇಕು. ಮುಂದಿನ ದಿನಗಳಲ್ಲಿ ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಬಾಲಕರ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣ ನನಗೆ ಬಹಳ ಹತ್ತಿರವಾದ ಹಾಗೂ ಪ್ರಿಯವಾದ ತಾಲೂಕು. ಇಲ್ಲಿನ ಜನ ಒಳ್ಳೆಯವರು. ಆದರೆ, ಇಲ್ಲಿ ಸರಿಯಾದ ನಾಯಕತ್ವ ಇಲ್ಲ. ಸದ್ಯ ಇಲ್ಲಿ ಶಾಸಕ ಸ್ಥಾನ ಖಾಲಿ ಇದೆ. ಹಾಗಾಗಿ ನಾನು ಬಂದಿದ್ದೇನೆ. ನಮ್ಮ ಪಕ್ಷಕ್ಕೆ ಒಂದು ಇತಿಹಾಸ ಇದೆ, ಜನತೆ ಜತೆ ನಮ್ಮ ಸರ್ಕಾರ ಇದೆ ಎಂಬುದನ್ನು ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ಈ ಹಿಂದೆ ಜಿಲ್ಲಾ ಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಧ್ವಜಾರೋಹಣ ಮಾಡುತ್ತಿದ್ದೆ. ಇಲ್ಲಿನ ಸ್ಥಳೀಯ ಎಂಎಲ್ಎ ಯಾವ ಸ್ವಾತಂತ್ರ್ಯೋತ್ಸವಕ್ಕೂ ಬರುತ್ತಿರಲಿಲ್ಲ. 6 ವರ್ಷದಲ್ಲಿ ಒಂದು ದಿನವೂ ಬಂದು ಧ್ವಜಾರೋಹಣ ಮಾಡಿಲ್ಲ. ಅವರಿಗೆ ಅನುಭವ ಇಲ್ಲ, ದೇಶದ ಸ್ವಾತಂತ್ರ್ಯ, ಇತಿಹಾಸದ ಬಗ್ಗೆ ಕಾಳಜಿ ಇಲ್ಲ. ಈ ನಿಟ್ಟಿನಲ್ಲಿ ನಾನು ಇಲ್ಲಿಗೆ ಬಂದು ಧ್ವಜಾರೋಹಣ ಮಾಡಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಎಚ್‌ಡಿಕೆಗೆ ಟಾಂಗ್ ನೀಡಿದರು.
ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ ಎಂಬ ಸಚಿವರು, ಶಾಸಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಶಾಸಕ, ಸಚಿವರು ಮಾತನಾಡುತ್ತಿಲ್ಲ. ಎಲ್ಲರೂ ಖುಷಿಯಾಗಿದ್ದಾರೆ. ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಇದರೊಂದಿಗೆ ಅನುದಾನವೂ ಸಿಗುತ್ತಿದೆ. ಪರಿಷ್ಕರಣೆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಒಂದಷ್ಟು ಅರ್ಜಿ ಬಂದಿವೆ. ಅದನ್ನು ನೋಡಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಯಾವ ಬದಲಾವಣೆ ಆಗಲ್ಲ ಎಂದರು.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಗೃಹಲಕ್ಷ್ಮಿಯೋಜನೆ ಹಣ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ, ಸದ್ಯಕ್ಕೆ ಅವೆಲ್ಲ ಏನು ಯೋಚನೆ ಮಾಡಿಲ್ಲ ಎಂದರು.
ಹಳೇ ದೋಸ್ತಿಗಳ ಸಮಾಗಮ: ಚನ್ನಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಇಬ್ಬರು ಹಳೇ ದೋಸ್ತಿಗಳ ಸಮಾಗಮದ ವೇದಿಕೆಯಾಯಿತು. ಬಹಳ ದಿನಗಳ ನಂತರ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಉಪಚುನಾವಣೆ ಹೊಸ್ತಿನಲ್ಲಿರುವ ಕ್ಷೇತ್ರದಲ್ಲಿ ಈ ಸಮಾಗಮ ಕುತೂಹಲ ಮೂಡಿಸಿತು. ಡಿಸಿಎಂ ವೇದಿಕೆಗೆ ಬರುತ್ತಲ್ಲೇ ಯೋಗೇಶ್ವರ್ ಕೈ ಮುಗಿಯುತ್ತ ಸ್ವಾಗತಿಸಿದರು. ಡಿಕೆಶಿ ಪ್ರತಿ ನಮಸ್ಕರಿಸಿ ಪಕ್ಕದಲ್ಲಿ ಆಸೀನರಾದರು. ಒಂದು ಗಂಟೆಗೂ ಹೆಚ್ಚುಕಾಲ ಅಕ್ಕಪಕ್ಕ ಕುಳಿತರೂ ಡಿಕೆಶಿ ಹಾಗೂ ಸಿಪಿವೈ ಒಂದೇ ಒಂದು ಮಾತನಾಡಲಿಲ್ಲ.
ಇತಿಹಾಸ ಸೃಷ್ಟಿಸಿದ ಕಾರ್ಯಕ್ರಮ: ತಾಲೂಕು ಕೇಂದ್ರವೊಂದರಲ್ಲಿ ಡಿಸಿಎಂ ಧ್ವಜಾರೋಹಣ ಮಾಡಿದ ಇತಿಹಾಸಕ್ಕೆ ಚನ್ನಪಟ್ಟಣ ಸಾಕ್ಷಿಯಾಯಿತು. ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ಬಳಿಕ ಒಮ್ಮೆಯೂ ಸ್ವಾತಂತ್ರ್ಯ ದಿನದಲ್ಲಿ ಭಾಗಿಯಾಗಿರಲ್ಲಿ. ಅವರು ಮಂಡ್ಯ ಸಂಸದರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಉಪ ಚುನಾವಣೆಯ ಹೊಸ್ತಿಲಿನಲ್ಲಿರುವ ಕ್ಷೇತ್ರದಲ್ಲಿ ಡಿಸಿಎಂ ಧ್ವಜಾರೋಹಣ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು. ಇಷು ್ಟದಿನ ಕಾಟಾಚಾರದ ಕಾರ್ಯಕ್ರಮ ಮಾಡಿ ಮುಗಿಸುತ್ತಿದ್ದ ತಾಲೂಕು ಆಡಳಿತ ಡಿಸಿಎಂ ಆಗಮನದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೊಂಚ ಅದ್ದೂರಿಯಾಗಿ ಕಾರ್ಯಕ್ರಮ ರೂಪಿಸಿತು. ಆದರೆ, ವೇದಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಸೇರಿ ಕೆಲವು ಎಡವಟ್ಟುಗಳು ಈ ಕಾರ್ಯಕ್ರಮದಲ್ಲೂ ಮುಂದುವರಿಯಿತು.