ವಿಜಯವಾಣಿ ಸುದ್ದಿಜಾಲ ಕಾರವಾರ
ನಿಮ್ಮ ಮನೆಯ ಕರೆಂಟ್ ಬಿಲ್ ಕಟ್ಟಿಲ್ಲ ಎಂದು ಸಂದೇಶ ಬಂದರೆ ಪ್ರತಿಕ್ರಿಯಿಸುವ ಮೊದಲು ಎಚ್ಚರವಾಗಿರಿ. ಇಂಥ ಸಂದೇಶ ಕಳಿಸಿ ಮೋಸ ಮಾಡುವ ಹೊಸ ವಿಧಾನವನ್ನು ಸೈಬರ್ ವಂಚಕರು ಕಂಡುಕೊಂಡಿದ್ದಾರೆ.
ವಿದ್ಯುತ್ ಬಿಲ್ ತುಂಬಿಲ್ಲ ಎಂದು ಮೊಬೈಲ್ ಸಂದೇಶ ಕಳಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ಸೋಮವಾರ ನಡೆದಿದ್ದು, ಈ ಸಂಬಂಧ ಇಲ್ಲಿನ ಸಿಇಎನ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಅರಗಾ ನೌಕಾನೆಲೆಯಲ್ಲಿರುವ ವೃದ್ಧ ರಾಜಕುಮಾರ್ ಉಮ್ರಾವ್ ಸಿಂಗ್ ಎಂಬುವವರ ಖಾತೆಯಿಂದ ವಂಚಕರು ಒಟ್ಟು 3.33 ಲಕ್ಷ ರೂ. ದೋಚಿದ್ದಾರೆ. ರಾಜಕುಮಾರ ಅವರ ಮೊಬೈಲ್ ನಂಬರ್‌ಗೆ 7480057152 ಸಂಖ್ಯೆಯಿಂದ ಎಸ್‌ಎಂಎಸ್ ಒಂದು ಬಂದಿತ್ತು. ನಿಮ್ಮ ಮನೆಯ ವಿದ್ಯುತ್ ಬಿಲ್ ಪಾವತಿಸಿಲ್ಲ. ಇಂದು ರಾತ್ರಿಯ ಒಳಗೆ ಕಟ್ಟದಿದ್ದರೆ ಸಂಪರ್ಕ ಕಡಿತ ಮಾಡಲಾಗುವುದು. ಬಿಲ್ ಪಾವತಿಸಲು ಇಲೆಕ್ಟ್ರಿಸಿಟಿ ಕಚೇರಿಯ ಅಧಿಕಾರಿ ಸಂಖ್ಯೆ-8250412470 ಸಂಖ್ಯೆಗೆ ಸಂಪಕಕರೆ ಮಾಡಿ ಎಂದು ಸಂದೇಶ ನೀಡಲಾಗಿತ್ತು.
ಅದನ್ನು ನಂಬಿದ ರಾಜಕುಮಾರ್ ಇಲೆಕ್ಟ್ರಿಸಿಟಿ ಅಧಿಕಾರಿಯ ಸಂಖ್ಯೆಗೆ ಕರೆ ಮಾಡಿದಾಗ ಅತ್ತಲಿಂದ ಅಧಿಕಾರಿಯಂತೆ ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ನಂತರ ವಿಡಿಯೋ ಕಾಲ್ ಮಾಡಿ, ರಾಜಕುಮಾರ್ ಅವರ ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್ ತೋರಿಸುವಂತೆ ತಿಳಿಸಿ, ಅದರ ವಿವರ ಪಡೆದಿದ್ದ. ಕೆಲವೇ ಹೊತ್ತಿನಲ್ಲಿ ಅವರ ಎರಡು ಬ್ಯಾಂಕ್ ಖಾತೆಗಳಿಂದ ಹಾಗೂ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 3.33 ಲಕ್ಷ ರೂ.ಗಳು ಕಡಿತವಾಗಿದೆ.
ಹೆಸ್ಕಾ ಯಾರಿಗೂ ಕರೆಂಟ್ ಬಿಲ್ ಕಟ್ಟಿಲ್ಲ ಎಂದು ಸಂದೇಶ ಕಳಿಸದು. ಹಾಗೆ ಸಂದೇಶ ಬಂದರೆ ಯಾವುದೇ ಪ್ರತಿಕ್ರಿಯೆ ನೀಡದೇ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು ಎಂದು ಹೆಸ್ಕಾಂ ಎಇಇ ವೀರೇಶ ಶೇಬಣ್ಣವರ್ ತಿಳಿಸಿದ್ದಾರೆ.