ಜಿಲ್ಲೆ

ಎಚ್‌ಕೆಎಸ್ ಪದವಿಪೂರ್ವ ಕಾಲೇಜಿನಲ್ಲಿ ವೈಭವದ ಜಾನಪದ ಕಲಾ ಸಂಭ್ರಮ

ಹಾಸನ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಚ್‌ಕೆಎಸ್ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಮತ್ತು ತಾಲೂಕು ಘಟಕದ ವತಿಯಿಂದ ಜಾನಪದ ಕಲಾ ಸಂಭ್ರಮವನ್ನು ಈಚೆಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ ಅವರು ಮಾತನಾಡಿ, ಜಾನಪದ ಸಾಹಿತ್ಯದ ಉಗಮ ಬೆಳವಣಿಗೆ ಮತ್ತು ಜಾನಪದ ತ್ರಿಪದಿಗಳು ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಸುತ್ತವೆ ಎಂದರು.
ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಜನಪದ ಸಾಹಿತ್ಯದ ಮೂಲ, ಉಗಮ, ಬೆಳವಣಿಗೆ, ಜಾನಪದ ಆಚರಣೆಯ ಮೂಲ ಉದ್ದೇಶ. ಜನಪದ ಸಾಹಿತ್ಯದಲ್ಲಿ ಮಣ್ಣಿನ ಸೊಗಡಿದೆ, ಆಚಾರ ವಿಚಾರ, ಪರಂಪರೆ, ಕಲೆ, ಜನರ ಜೀವನ ವಿಧಾನ, ರೀತಿ-ನೀತಿಗಳು, ಮೌಲ್ಯ ಮತ್ತು ಶಿಕ್ಷಣವಿದೆ. ಜನಪದದಲ್ಲಿ ಜಾತಿ, ಧರ್ಮ, ಪ್ರಾದೇಶಿಕತೆ ಎಂಬುದು ಇಲ್ಲ. ಜನಪದ ಕಲೆಗಳನ್ನು, ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು .
ಜಾನಪದ ಸಂಭ್ರಮದಲ್ಲಿ ಕಲಾವಿದರು ಜನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಜಾನಪದ ಕಲೆಗಳಾದ ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತಗಳು ಸಭಿಕರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಜಿ. ವಿಮಲ್ ರಾಜ್, ಎಚ್‌ಕೆಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಚ್.ಎಸ್.ಪ್ರಶಾಂತ್ ಗೌಡ, ಕಾಲೇಜಿನ ಪ್ರಾಂಶುಪಾಲ ಎ.ಪ್ರವೀಣ್, ಉಪ ಪ್ರಾಂಶುಪಾಲ ಕೆ. ಆದಿತ್ಯವಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಲೋಕೇಶ್ ಪೂಜಾರಿ ಸ್ವಾಗತಿಸಿದರೆ, ಸಂಸ್ಕೃತ ಉಪನ್ಯಾಸಕ ರವಿಶಂಕರ್ ಹೆಗಡೆ ಅವರು ವಂದಿಸಿದರು. ಕನ್ನಡ ಉಪನ್ಯಾಸಕ ಎಂ.ರಮೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.