ಕಲಬುರಗಿ: ಯುವಕರಲ್ಲಿ ಉದ್ಯೋಗ ಕೌಶಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಚ್‌ಕೆಈಸ್ ಉದ್ಯೋಗ್ ಎಂಬ ವೇದಿಕೆ ಪ್ರಾರಂಭಿಸುತ್ತಿದ್ದು, ವಿ.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಬೆಳಗ್ಗೆ ೧೦.೧೫ಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆಗೆ ಚಾಲನೆ ನೀಡಲಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂಎಲ್‌ಸಿ ಶಶೀಲ್ ನಮೋಶಿ ತಿಳಿಸಿದರು.
ಉದ್ಯಮಶೀಲತೆ ಮತ್ತು ಉದ್ಯೋಗಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿನ ಅವಕಾಶಗಳ ಬಗ್ಗೆ ಜಾಗೃತಿ, ಜಾಗತಿಕ ಮಟ್ಟದ ಬೇಡಿಕೆ ಕುರಿತು ತಂತ್ರಜ್ಞಾನದ ಮೇಲೆ ತರಬೇತಿ ನೀಡಿ ಮಾರ್ಗದರ್ಶನ ಮಾಡುವುದು ವೇದಿಕೆ ಪ್ರಮುಖ ಉದ್ದೇಶ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಬಿ.ಪಾಟೀಲ್, ಆಡಳಿತ ಮಂಡಳಿ ಸದಸ್ಯರು ಆಹ್ವಾನಿತರಾಗಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವೇದಿಕೆಯನ್ನು ಅವಿನಾಶ ಸಾಂಬ್ರಾಣಿ ನಡೆಸಿಕೊಂಡು ಹೋಗಲಿದ್ದಾರೆ. ನಿರುದ್ಯೋಗಿ ಯುವಕರಿಗೆ ಸಲಹೆ, ತರಬೇತಿ, ಲಭ್ಯವಿರುವ ಉದ್ಯೋಗ ಮಾಹಿತಿ ಸೇರಿ ಉಪಯುಕ್ತ ಮಾರ್ಗದರ್ಶನ ಮಾಡಲಾಗುತ್ತದೆ. ಪಿಡಿಎ ಕಾಲೇಜಿನಲ್ಲಿ ಉದ್ಯೋಗ ಮತ್ತು ತರಬೇತಿಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಪ್ರಾರಂಭಿಸಲಾಗಿದೆ. ಪ್ರತಿವರ್ಷ ಇಂಜಿನಿಯರಿAಗ್‌ಗೆ ಪ್ರವೇಶ ಪಡೆಯುವ ೧೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದರ ಲಾಭ ಸಿಗಲಿದೆ ಎಂದರು.
ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡು ಉದ್ಯೋಗಾವಕಾಶ ನೀಡುವ ಯೋಜನೆ ರೂಪಿಸಲಾಗಿದೆ. ಜತೆಗೆ ಕ್ಯಾಟ್‌ಮ್ಯಾಕ್ಸ್ ಜತೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ವಿ.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಬೆಳಗ್ಗೆ ೧೦.೩೦ಕ್ಕೆ ನಡೆಯುವ ಉದ್ಯೋಗ ಮೇಳದಲ್ಲಿ ೮೦೦ಕ್ಕೂ ಅಧಿಕ ೧೮-೨೬ ವರ್ಷದ ಅವಿವಾಹಿತ ಯುವತಿಯರು ಭಾಗವಹಿಸಲಿದ್ದಾರೆ. ಬಸವೇಶ್ವರ ಆಸ್ಪತ್ರೆಯಲ್ಲಿ ಸುಮಾರು ೧೦೦ ನರ್ಸಿಂಗ್ ಪದವೀಧರರಿಗೆ ಉದ್ಯೋಗಾವಕಾಶ ಒದಗಿಸುವ ಮೂಲಕ ಆಸ್ಪತ್ರೆ ಸುಧಾರಣೆ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಬಿ.ಪಾಟೀಲ್, ಡಾ.ಕಿರಣ ಪಾಟೀಲ್, ನಿಶಾಂತ ಎಲಿ, ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಆರ್. ಮೀಸೆ ಇತರರಿದ್ದರು.