ಜಿಲ್ಲೆ

ಎಚ್‌ಐವಿ ಜಾಗೃತಿಗಾಗಿ ಮ್ಯಾರಥಾನ್

Chitradurga - Desk - Pranav Kumar

ಚಿತ್ರದುರ್ಗ: ಯುವ ಜನೋತ್ಸವದ ಅಂಗವಾಗಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದಿಂದ ಶನಿವಾರ ನಗರದಲ್ಲಿ ಎಚ್‌ಐವಿ ಜಾಗೃತಿಗಾಗಿ ನಡೆದ 5 ಕಿ.ಮೀ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ಅನೇಕ ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.

ಸ್ಪರ್ಧೆ ಕನಕ ವೃತ್ತದಿಂದ ಆರಂಭವಾಗಿ ಬಿ.ಡಿ.ರಸ್ತೆ, ಪ್ರವಾಸಿ ಮಂದಿರ, ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಒನಕೆ ಓಬವ್ವ ವೃತ್ತ ಮಾರ್ಗಗಳಲ್ಲಿ ಸಂಚರಿಸಿತು.

ಡಿಎಚ್‌ಒ ಡಾ.ಆರ್.ರಂಗನಾಥ್ ಚಾಲನೆ ನೀಡಿ ಮಾತನಾಡಿ, ಯುವಸಮೂಹಕ್ಕೆ ಎಚ್‌ಐವಿ ಕುರಿತು ಅರಿವು ಬಹಳ ಮುಖ್ಯ. ಸೋಂಕಿತರಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಸೋಂಕಿನ ವಿರುದ್ಧ ಹೋರಾಡಲು, ಹೆಚ್ಚೆಚ್ಚು ಅರಿವು ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ. ಸೋಂಕಿತರಿಗಿರುವ ಕಳಂಕ, ತಾರತಮ್ಯ ಹೋಗಲಾಡಿಸಲು ಮುಂದಾಗಿ ಎಂದು ಮನವಿ ಮಾಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸಿ.ಓ.ಸುಧಾ ಮಾತನಾಡಿ, ಎಚ್‌ಐವಿ ಕುರಿತು ಅರಿವು, ಏಡ್ಸ್ ಸೇವಾ ಸೌಲಭ್ಯಗಳ ಮಾಹಿತಿ, ತಾರತಮ್ಯ ತಡೆ, ನಿಯಂತ್ರಣ ಕಾಯ್ದೆ, ಉಚಿತ ರಾಷ್ಟ್ರೀಯ ಸಹಾಯವಾಣಿ 1097 ಎಸ್‌ಟಿಐ ಇತರೆ ಅಂಶಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಜಿಲ್ಲಾ ಮೇಲ್ವಿಚಾರಕ ವಿ.ಅಶೋಕ ಉಪನ್ಯಾಸ ನೀಡಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್, ವಿವಿಧ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಘಟಕದ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಇದ್ದರು.

ವಿಜೇತರಿಗೆ ಬಹುಮಾನ: ಸ್ಪರ್ಧೆಯಲ್ಲಿ ವಿಜೇತರಾದ ಯುವಕ-ಯುವತಿಯರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ವಿತರಿಸಲಾಯಿತು. ಪ್ರಥಮ-5ಸಾವಿರ ರೂ., ದ್ವಿತೀಯ-3,500 ರೂ., ತೃತೀಯ-2,500 ರೂ., ನಾಲ್ವರು ಯುವಕರು, ಮೂವರು ಯುವತಿಯರಿಗೆ ತಲಾ 1ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಯಿತು.