ಬಾಗಲಕೋಟೆ: ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ೩೯ ದಿನಗಳ ಕಾಲ ಹೋರಾಟ ಕೈಗೊಂಡ ಪರಿಣಾಮ ಅನೇಕ ಬದಲಾವಣೆ ಆಗಿದ್ದು, ರೈತರಿಗೆ ವರದಾನವಾಗಿದೆ. ಸರ್ಕಾರ ಕಬ್ಬು ಸಾಗಾಟ ಹಾಗೂ ಕಟಾವು ವೆಚ್ಚ ಹೆಚ್ಚು ಮಾಡಿದ್ದು, ಅದನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಎಲ್ಲ ಕಾರ್ಖಾನೆಗಳಿಗೆ ಒಂದೇ ನಿಯಮ ಜಾರಿಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕಬು ಸಾಗಾಟ, ಕಟಾವು ವೆಚ್ಚ ಪ್ರತಿ ಟನ್ ಕಬ್ಬಿಗೆ ೯೦೦ ರೂ.ರಿಂದ ೧೦೦೦ ರೂ. ವರೆಗೆ ವಿಽಸಲಾಗುತ್ತಿದೆ. ಇದನ್ನು ಕಡಿಮೆಗೊಳಿಸಲು ಮನವಿ ಮಾಡಲಾಗಿದೆ. ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದ್ದು, ಬೇಡಿಕೆ ಈಡೇರದಿದ್ದರೇ ಹೋರಾಟ ಅನಿವಾರ್ಯವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಹೋರಾಟ ಕೈಗೊಂಡ ಪರಿಣಾಮ ರಾಜ್ಯ ಸರ್ಕಾರ ಎಫಆರ್‌ಪಿ ದರ ಮೇಲೆ ಹೆಚ್ಚುವರಿಯಾಗಿ ಬಿಲ್ ಪಾವತಿಸಲು ಆದೇಶಿಸಿದೆ. ಎಥಿನಾಲ್ ಉತ್ಪಾದನೆ ಮಾಡುವ ಕಾರ್ಖಾನೆಗಳು ಪ್ರತಿಟನ್‌ಗೆ ೧೫೦ ರೂ., ಉತ್ಪಾದನೆ ಮಾಡದ ಕಾರ್ಖಾನೆಗಳು ೧೦೦ ರೂ. ನೀಡಲು ತಿಳಿಸಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ೯೦೦ ಕೋಟಿ ರೂ. ಅಧಿಕ ಹಣ ರೈತರಿಗೆ ಸಂದಾಯವಾಗಲಿದೆ. ಸರ್ಕಾರ ಬದ್ಧತೆಯಿಂದ ಆದೇಶ ಜಾರಿ ಮಾಡುವ ವಿಶ್ವಾಸವಿದೆ ಎಂದರು.
ಕೇಂದ್ರ ಸರ್ಕಾರ ಎಫಆರ್‌ಪಿ ದರ ನಿಗದಿ ಮಾಡುವಾಗ ಸಕ್ಕರೆ ಇಳುವರಿ ಪ್ರಮಾಣವನ್ನು ೮.೫೦ ರಿಂದ ೧೦.೨೫ಕ್ಕೆ ಏರಿಕೆ ಮಾಡಿರುವುದನ್ನು ಕೈ ಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭೇಟಿ ಮಾಡಿ ಮನವಿ ಮಾಡಲಾಗಿದೆ. ಕಬ್ಬು ಬೆಳೆಯುವ ರಾಜ್ಯಗಳ ಸಂಸದರ ಸಭೆ ಕರೆದು ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಕೃಷಿ ಸಾಲಕ್ಕೆ ಸಿಬಿಎಲ್ ಸ್ಕೋರ್ ಪರಿಗಣಿಸಬಾರದು ಅಂತ ಬ್ಯಾಂರ‍್ಸಗಳಿಗೆ ನಿಯಮ ಜಾರಿಗೊಳಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ನಿರ್ಧಾರ ಮಾಡಲಾಗುವುದು ಆರ್‌ಬಿಐ ವ್ಯವಸ್ಥಾಪಕರು ಭರವಸೆ ನೀಡಿದ್ದಾರೆ. ಇವೆಲ್ಲದಕ್ಕೂ ಕಾದು ನೋಡುತ್ತಿದ್ದೇವೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ ದೇಶದಾದ್ಯಂತ ಪ್ರಬಲ ಹೋರಾಟ ರೂಪಿಸಲು ರಾಜಸ್ಥಾನದ ಹನುಮಾನ್ ಗಾಡ್‌ನಲ್ಲಿ ಫೆ.೪ ರಿಂದ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ರೈತ ಮುಖಂಡರ ಸಮಾವೇಶ ಹಮ್ಮಿಕೊಳ್ಳಲಾಗುವುದು. ವಿವಿಧ ಭಾಗದಿಂದ ಪಕ್ಷಾತೀತವಾಗಿ ಮುಖಂಡು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ಪರಶುರಾಮ ಎತ್ತಿನಗುಡ್ಡ, ಬರಡನಪುರ ನಾಗರಾಜ್ ಇದ್ದರು.