ಜಿಲ್ಲೆ

ಎಚ್.ಡಿ.ಕುಮಾರಸ್ವಾಮಿ ಉಲ್ಲೇಖಿಸಿ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ

ಹಾಸನ: ಸಿಎಂ ವಿರುದ್ಧ ಎಫ್‌ಐಆರ್ ಆಗಿರುವುದನ್ನು ಕೇಳುತ್ತಿರಾ. ಆದರೆ ಎಚ್.ಡಿ.ಕುಮಾರಸ್ವಾಮಿ ಮೇಲೆ ಎಫ್‌ಐಆರ್ ಆಗಿ ಬೇಲ್ ಮೇಲೆ ಹೊರಗಿದ್ದಾರೆ. ಅದನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಗರಂ ಆಗಿ ಹೇಳಿದರು.
ಹೇಮಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಸಿಎಂ ಮೇಲೆ ಎಫ್‌ಐಆರ್ ಆಗಿ ತನಿಖೆ ಮಾಡಲು ಹೇಳಿದ್ದಾರೆ. ತನಿಖೆಯಲ್ಲಿ ಅರ್ಜಿದಾರನದ್ದು ಸರಿ ಇದೆಯಾ? ತಪ್ಪಿದೆಯಾ? ಇವರ ವಾದ ಸರಿ ಇದೆಯಾ? ಅನ್ನುವುದು ಗೊತ್ತಾಗುತ್ತದೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿ ನಾಲ್ಕು ತಂಡ ರಚಿಸಲಾಗಿದೆ. ಡಿಸೆಂಬರ್ 24ರೊಳಗೆ ವರದಿ ಕೊಡಬೇಕಾಗುತ್ತದೆ. ಅವರು ಕಾನೂನಿನ ಅಡಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ ಎಂದರು.
ಎಫ್‌ಐಆರ್ ಆಗಿ, ಕೋರ್ಟ್‌ನಲ್ಲಿ ಚಾರ್ಜ್‌ಶೀಟ್ ಫೈಲ್ ಮಾಡಿ, ಬೇಲ್ ತೆಗೆದುಕೊಂಡಿರುವವರು ರಾಜ್ಯದಲ್ಲಿ, ಕೇಂದ್ರದಲ್ಲಿ ಎಷ್ಟು ಜನ ಇದ್ದಾರೆ. ಹಾಲಿ ಕೇಂದ್ರ ಸರ್ಕಾರದಲ್ಲಿ ಎಷ್ಟು ಜನ ಇದ್ದಾರೆ. ಎಫ್‌ಐಆರ್ ಆದಾಕ್ಷಣಕ್ಕೆ ಅವರು ತಪ್ಪಿತಸ್ಥ ಅಂತ ಆಗಲ್ಲ. ದೂರು ಬಂದಿದೆ. ದೂರಿನ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆ ಮಾಡಲು ಕಾನೂನಿನ ಕ್ರಿಯೆ ನಡೆಯುತ್ತಿದೆ. ಅದಕ್ಕೆ ದೊಡ್ಡ ಮಹತ್ವ ಕೊಡುವುದು ಬೇಡ ಎಂದು ಹೇಳಿದರು. ಕುಮಾರಸ್ವಾಮಿ ಮೇಲೆ ಪ್ರಕರಣ ಇದೆ. ಬೇಲ್ ತೆಗೆದುಕೊಂಡಿದ್ದಾರೆ. ಚಾರ್ಜ್‌ಶೀಟ್ ಆಯ್ತು, ಕೋರ್ಟ್‌ನಿಂದ ಸಮನ್ಸ್ ಬಂತು, ಆಮೇಲೆ ಬೇಲ್ ತೆಗೆದುಕೊಂಡಿದ್ದಾರೆ. ಅದನ್ನು ಮಾಧ್ಯಮದವರು ಪ್ರಸ್ತಾಪ ಮಾಡಿಲ್ಲ. ಯಾರ ಮೇಲೆ ಎಫ್‌ಐಆರ್ ಇಲ್ಲ ಹೇಳಿ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರ ವಿರುದ್ಧ ಎಡಿಜಿಪಿ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಎಡಿಜಿಪಿ ಯಾರಿಗೆ ಹಂದಿಗಳು ಅಂತ ಹೇಳಿದ್ದಾರೆ. ಸಗಣಿಯವನ ಹತ್ತಿರ ಸರಸ ಆಡಬಾರದು, ಗಂಧದವನ ಜೊತೆ ಗುದ್ದಾಡಿ ಎಂದು ನಾವು ಹಳ್ಳಿಯಲ್ಲಿ ಕೇಳಿಲ್ವಾ. ಅದೇ ರೀತಿ ಅವರು ಜಾರ್ಜ್ ಬರ್ನಾಡ್ ಷಾ ಅವರು ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅದನ್ನು ದೊಡ್ಡದಾಗಿ ಅರ್ಥೈಸುವುದು ಏನಿದೆ ಎಂದರು.

ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತವೆ:
ನಮ್ಮ ಪಕ್ಷದಲ್ಲೂ ಷಡ್ಯಂತ್ರಗಳು ನಡೆಯುತ್ತಿವೆ ಎನ್ನುವ ಮಾತನ್ನು ನಾವು ತಳ್ಳಿ ಹಾಕುವಂತಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮುಡಾ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್‌ನವರು ಎಂಬ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದವರು ಕೊಟ್ಟಿದ್ದಾರೋ, ಅವರ ಪಕ್ಷದವರು ಕೊಟ್ಟಿದ್ದಾರೋ ನಮಗೆ ಗೊತ್ತಿಲ್ಲ. ಅವರಿಗೂ ಗೊತ್ತಿಲ್ಲ. ಕೊಡುವಂತಹದ್ದು, ತೆಗೆದುಕೊಳ್ಳುವಂತಹದ್ದು ಏನು ಇರಲ್ಲ. ಪಕ್ಷದಲ್ಲಿ ಷಡ್ಯಂತ್ರ ನಡೆಯಲ್ಲ ಅಂತ ಹೇಳಲು ಆಗಲ್ಲ. ರಾಜಕಾರಣದಲ್ಲಿ ಇವೆಲ್ಲಾ ಸಾಮಾನ್ಯ. ಅಧಿಕಾರ ಪಡೆಯಲು ಎಲ್ಲ ಪಕ್ಷದವರು ಪ್ರಯತ್ನ ಮಾಡುತ್ತಾರೆ. ಎಲ್ಲ ರಾಜಕೀಯ ಮುಖಂಡರು ಅಧಿಕಾರಕ್ಕೆ ಬರಬೇಕೆಂದು ಪ್ರಯತ್ನ ಮಾಡುತ್ತಾರೆ ಅದರಲ್ಲಿ ತಪ್ಪೇನಿಲ್ಲ ಎಂದರು.
ಸಿಬಿಐ ಮುಕ್ತ ತನಿಖೆ ಅಧಿಕಾರ ಮೊಟಕುಗೊಳಿಸಿರುವ ವಿಚಾರ ಕುರಿತು ಮಾತನಾಡಿದ ಅವರು, ಇದು ನಿರಂತರವಾಗಿ ನಡೆಯುವಂತಹದ್ದು, ಹಿಂದೆ 1977 ರಲ್ಲಿ ದೇವರಾಜ ಅರಸು ವಾಪಸ್ ತೆಗೆದಿದ್ದರು. ಬೇರೆ, ಬೇರೆ ಮುಖ್ಯಮಂತ್ರಿಗಳು ಇದ್ದಾಗ ಈ ರೀತಿ ಪ್ರಕ್ರಿಯೆ ನಡೆದಿದೆ. ಇದು ಹೊಸದಲ್ಲ. ಮುಂದೆ ಅಗತ್ಯತೆ ಬಿದ್ದರೆ ಮುಕ್ತ ತನಿಖೆ ಮಾಡಲು ಅವಕಾಶ ಕೊಡಬಹುದು. ಕರ್ನಾಟಕ ಸರ್ಕಾರ ಮಾಡಿದೆ ಅಂತ ಅಲ್ಲ. ಬಿಜೆಪಿ ಅಧಿಕಾರದಲ್ಲಿರುವ ಎಷ್ಟು ಕಡೆ ವಾಪಸ್ ತೆಗೆದುಕೊಂಡಿಲ್ಲ. ಇಲ್ಲಿ ಮಾಡಿದರೆ ಮಾತ್ರ ದೊಡ್ಡದು ಅಂತ ಮೋದಿಯವರು ಹರಿಯಾಣ ಚುನಾವಣೆಯಲ್ಲಿ ಮಾತನಾಡುತ್ತಾರೆ. ಮಹಾನ್ ತಪ್ಪು ಮಾಡಿದ್ದಾರೆ ಅಂತ ಬಿಂಬಿಸುವುದು ಸರಿಯಲ್ಲ ಎಂದರು.