ಬೀದರ್: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ(ಎಚ್.ಕೆ.ಇ) ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ ಡಾ.ರಜನೀಶ್ ವಾಲಿ ಭರ್ಜರಿ ಜಯ ಗಳಿಸಿದ್ದಾರೆ.
ಪತ್ರಿಕೋದ್ಯಮ, ಸಾಮಾಜಿಕ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ವಾಲಿ, ಈ ಗೆಲುವಿನೊಂದಿಗೆ ಶಿಕ್ಷಣ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಬಸವರಾಜ ಭೀಮಳ್ಳಿ ಪೆನಾಲ್ನಿಂದ ಸ್ಪರ್ಧೆಗಿಳಿದಿದ್ದರು. ತಮ್ಮ ಪ್ರಥಮ ಚುನಾವಣೆಯಲ್ಲೇ ಜಯ ದಾಖಲಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಎಚ್ ಕೆಇ ಸಂಸ್ಥೆ ಆಡಳಿತ ಮಂಡಳಿಗೆ ಶನಿವಾರ ಮತದಾನ, ಭಾನುವಾರ ಕಲಬುರಗಿ ಪಿಡಿಎ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಬೀದರ್ ನ ಒಂದು ಕ್ಷೇತ್ರದಿಂದ ಸ್ಪರ್ಧಿಸಿದ್ದ ವಾಲಿ ಅವರಿಗೆ ದಾಖಲೆಯ 544 ಮತಗಳು ಬಿದ್ದಿವೆ. ಇವರ ಪ್ರತಿಸ್ಪರ್ಧಿ ಡಾ.ಅಲ್ಲಮಪ್ರಭು 350 ಹಾಗೂ ಸಂಗಮೇಶ ಗಂಗೂ 281 ಮತ ಪಡೆದು ಪರಾಭವಗೊಂಡಿದ್ದಾರೆ.
ಈ ಸಲದ ಚುನಾವಣೆ ಜಿದ್ದಾಜಿದ್ದಿನ ಹಣಾಹಣಿಗೆ ಕಾರಣವಾಗಿತ್ತು. ವಾಲಿ ಕಳೆದೊಂದು ತಿಂಗಳಿಂದ ನಡೆಸಿದ ಪ್ರಯತ್ನದ ಜತೆಗೆ ತಮ್ಮ ನೆಟ್ ವಕ್೯ ಮೂಲಕ ಮತದಾರರನ್ನು ಸೆಳೆದು ಗೆಲುವಿನ ನಗೆ ಬೀರಿದ್ದಾರೆ. ಭರ್ಜರಿ ಜಯಭೇರಿ ಹಿನ್ನೆಲೆಯಲ್ಲಿ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮತ್ತಿತರ ಗಣ್ಯರು ವಾಲಿ ಅವರನ್ನು ಸತ್ಕರಿಸಿ ಅಭಿನಂದಿಸಿದರು.
ವಾಲಿ ಈ ಹಿಂದೆ ಬ್ರಿಮ್ಸ್ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ, ವಾಲಿ ಗ್ರೂಪ್ ಆಫ್ ಕಂಪನಿ ಸಿಇಒ, ವಾಲಿಶ್ರೀ ಆಸ್ಪತ್ರೆ ಚೇರ್ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ ವೇಳೆ ಬಡವರು, ಕೂಲಿಕಾರರಿಗೆ ಆಹಾರಧಾನ್ಯ ವಿತರಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿ ಕೋವಿಡ್ ಸೋಂಕಿತರಿಗೆ ವಾಲಿಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ರಜನೀಶ್ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರ ಪುತ್ರ.