ಕೆ.ಆರ್.ನಗರ: ಎಚ್.ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಿ, ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಆಂಜನೇಯ ಬಡಾವಣೆಯ ಉಪ್ಪಾರ ಶ್ರೀರಾಮ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಶ್ರೀ ಭಗೀರಥ ಉಪ್ಪಾರರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಎಚ್.ಕಾಂತರಾಜು ಆಯೋಗದ ವರದಿ ಸ್ವೀಕಾರ ವಿಚಾರದಲ್ಲಿ ಯಾವುದೇ ಒತ್ತಡ ಮತ್ತು ಯಾರ ಮುಲಾಜಿಗೂ ಮುಖ್ಯಮಂತ್ರಿ ಒಳಗಾಗಬಾರದು ಎಂದರು.
ಕಾಂತರಾಜು ಆಯೋಗದ ವರದಿಯ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆ ವರದಿಯನ್ನು ಓದಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅವರು ವರದಿಯನ್ನು ಪರಿಶೀಲಿಸಿ ಅಂತಿಮಗೊಳಿಸಿದ್ದು, ಅವರಿಗಿಂತ ಈ ಇಬ್ಬರು ಮಹಾನ್ ನಾಯಕರು ಬುದ್ಧಿವಂತರೆ? ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಎಲ್.ಜಿ.ಹಾವನೂರರ ವರದಿಯನ್ನು ಹಿಂದುಳಿದ ವರ್ಗಗಳ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಜಾರಿಗೆ ತರುವಾಗ ಯಾವುದೇ ಒತ್ತಡಕ್ಕೂ ಜಗ್ಗಲಿಲ್ಲ. ಅದರ ಪರಿಣಾಮ ಹಿಂದುಳಿದ ಜಾತಿಯವರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.
ಹೊಸ ಜಿಲ್ಲೆಗೆ ಅಸ್ತಿತ್ವಕ್ಕೆ ಬರುವುದು ಶತಃಸಿದ್ಧ: ಮೈಸೂರು ಜಿಲ್ಲೆಯಿಂದ ಹುಣಸೂರು ಉಪವಿಭಾಗವನ್ನು ಬೇರ್ಪಡಿಸಿ ಡಿ.ದೇವರಾಜ ಅರಸು ಅವರ ಹೆಸರಿನಲ್ಲಿ ನೂತನ ಜಿಲ್ಲೆ ಘೋಷಣೆ ಮಾಡಲು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಯಾರೂ ಏನೇ ವಿರೋಧ ಮಾಡಿದರೂ ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬರುವುದು ಶತಃಸಿದ್ಧ ಎಂದ ಎಚ್.ವಿಶ್ವನಾಥ್, ಇದಕ್ಕೆ ವಿರೋಧ ಮಾಡುವವರಿಗೆೆ ಯಾರೂ ಆದ್ಯತೆ ನೀಡಬಾರದು ಎಂದು ಹೇಳಿದರು.
ವರದಿ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವಿಶ್ವನಾಥ್, ಈ ಹಿಂದೆ ಕೆ.ಆರ್.ನಗರ ತಾಲೂಕಿನಿಂದ ಸಾಲಿಗ್ರಾಮವನ್ನು ಬೇರ್ಪಡಿಸಿ ಹೊಸ ತಾಲೂಕನ್ನು ಅಸ್ತಿತ್ವಕ್ಕೆ ತಂದಾಗ ನೀವು ಎಲ್ಲಿದ್ದೀರಿ? ಯಾರನ್ನು ಕೇಳಿದ್ದೀರಿ? ಎಂದು ಕಿಡಿಕಾರಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಸಮಾಜದಲ್ಲಿ ಹಿಂದುಳಿದ ವರ್ಗ ಮತ್ತು ಜಾತಿಯವರು ಗಟ್ಟಿಯಾಗಿ ನಿಲ್ಲಬೇಕಾದರೆ ಒಗ್ಗಟ್ಟು ಮತ್ತು ಸಂಘಟನೆ ಅತ್ಯಂತ ಅವಶ್ಯವಾಗಿದೆ. ಇದನ್ನು ಮನಗಂಡು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.
ಸಮುದಾಯ ಅಭಿವೃದ್ಧಿಯಾಗಿ ರಾಜಕೀಯ ಅಧಿಕಾರ ಸಿಗಬೇಕಾದರೆ ಶೈಕ್ಷಣಿಕ ಏಳಿಗೆ ಪ್ರಮುಖವಾಗಿದ್ದು, ಇದನ್ನು ಮನಗಂಡು ಉಪ್ಪಾರ ಸಮಾಜದದವರು ತಮ್ಮ ಮಕ್ಕಳಿಗೆ ಉನ್ನತ ಮತ್ತು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರಲ್ಲದೆ, ನನ್ನ ಶಾಸಕತ್ವದ ಅವಧಿಯಲ್ಲಿ ಉಪ್ಪಾರ ಸಮಾಜಕ್ಕೆ ಹೆಚ್ಚಾಗಿ ರಾಜಕೀಯ ಅಧಿಕಾರ ನೀಡಲಾಗುವುದು. ಸಮಾಜದ ಮುಖಂಡರ ಬಹುದಿನಗಳ ಬೇಡಿಕೆಯಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ನಿವೇಶನ ಕೊಡುವುದರ ಜತೆಗೆ ಸರ್ಕಾರದಿಂದ ಅಗತ್ಯ ಅನುದಾನ ಮತ್ತು ವೈಯಕ್ತಿಕ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ವಾಣಿಜ್ಯ ಇಲಾಖೆಯ ನಿವೃತ್ತ ಅಪರ ಆಯುಕ್ತ ಡಿ.ಜಗನ್ನಾಥ್ ಸಾಗರ್, ಸಂಘದ ಅಧ್ಯಕ್ಷ ಕಾಟ್ನಾಳು ಮಹದೇವ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಟಿ.ರಾಮೇಗೌಡ, ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್ ಮಾತನಾಡಿದರು.
ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎಚ್.ಟಿ.ಪಾಂಡು, ಸಂಘದ ಪದಾಧಿಕಾರಿಗಳಾದ ಎಸ್.ಯೋಗಾನಂದ, ಮುದುಗುಪ್ಪೆಕುಮಾರ್, ಡಿ.ತಮ್ಮಯ್ಯ, ಯೋಗೀಶ್‌ಕುಮಾರ್, ಟಿ.ರಾಮಕೃಷ್ಣ, ಸೋಮಣ್ಣ, ಮೋಹನ್, ಬಿ.ಕೆ.ನಾಗಣ್ಣ, ಸಂದೀಪ್, ಗೋವಿಂದೇಗೌಡ, ಮಂಜುನಾಥ್, ತಿಪ್ಪೂರು ರವಿ ಇತರರು ಇದ್ದರು.