ಚಾಮರಾಜನಗರ: ಅಂತರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ‘ಸುಸ್ಥಿರ ಅಭಿವೃದ್ಧಿಗಾಗಿ ಸ್ಥಳೀಯ ಯುವಜನರ ಪಾತ್ರ ಮತ್ತು ಗುರಿಗಳು’ ಘೋಷವಾಕ್ಯದೊಂದಿಗೆ ಎಚ್.ಐ.ವಿ. ಏಡ್ಸ್ ತೀವ್ರ ಅರಿವಿನ ಮಾಸಾಚರಣೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ವಿವಿಯ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಜನತೆಯು ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾದ ಸಂದರ್ಭಗಳು ಎದುರಾಗಿವೆ. ಇವುಗಳಿಂದ ಹೊರಬರಲು ಹೇಗೆ ಜಾಗೃತಿ ಹೊಂದಬೇಕು, ಶಿಕ್ಷಣದ ಪಠ್ಯವಲ್ಲದೇ ಇತರೇ ಪಠ್ಯೇತರ ಚಟುವಟಿಕೆಗಳಿಂದಲೂ ಹಲವಾರು ಸುವಿಚಾರಗಳನ್ನು ಅರಿತು ಸಮಾಜದಲ್ಲಿ ಉತ್ತಮ ಮತ್ತು ಆರೋಗ್ಯವಂತ ವ್ಯಕ್ತಿಯಾಗಿ ಜೀವಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ತಿಳಿಸಿದರು.
ವಿವಿಯ ಆಡಳಿತ ಕುಲಸಚಿವ ಆರ್.ಲೋಕನಾಥ್ ಮಾತನಾಡಿ, ಆಧುನಿಕತೆಯ ಜಂಜಾಟದಲ್ಲಿ ಯುವಜನರು ಮಾನಸಿಕವಾಗಿ ತನಗರಿವಿಲ್ಲದೇ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹಾಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಯುವಜನತೆ, ನಾಗರಿಕ ಸಮುದಾಯಗಳ ಭಾಗವಹಿಸುವಿಕೆಯೂ ಪ್ರಮುಖವಾಗಿದೆ. ಶಿಕ್ಷಣದ ಜೊತೆಗೆ ಸಮಾಜವನ್ನು ಜವಾಬ್ದಾರಿಯುತವಾಗಿ ಜಾಗೃತಗೊಳಿಸುವ ಅನಿವಾರ್ಯತೆ ಯುವಸಮೂಹದ ಮೇಲೆ ಇದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಮಾತನಾಡಿ, ಇಂದು ವಿಶ್ವಾದ್ಯಂತ ಯುವಜನತೆಯ ಸಮಸ್ಯೆಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯುವಜನರು ಇಂದು ಜವಾಬ್ದಾರಿಯಿಂದ ಬದುಕು ಕಟ್ಟಿಕೊಳ್ಳಬೇಕಿದೆ. ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ. ಆಧುನಿಕ ಯುಗದಲ್ಲಿ ಮಾದಕ ವ್ಯಸನ, ಅಸುರಕ್ಷಿತ ಲೈಂಗಿಕ ಕ್ರಮಗಳ ಮುನ್ನೆಚ್ಚರಿಕೆ ಬಗೆಗೆ ಅಳವಾಗಿ ಅರಿತು ಸಮಾಜದ ಹಿರಿಯರಿಗೆ, ಕಿರಿಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದಿನ ಯುವಜನತೆ ಹೆಜ್ಜೆಯಿಡಬೇಕಿದೆ ಎಂದರು.
ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಜಿ.ವಿ. ವೆಂಕಟರಮಣ, ಆರೋಗ್ಯ ಇಲಾಖೆಯ ಜಿಲ್ಲಾ ಆಪ್ತ ಸಮಾಲೋಚಕ ಮಹದೇವ ಪ್ರಸಾದ್, ಆರೋಗ್ಯ ಇಲಾಖೆಯ ಡಾ. ರವಿಕುಮಾರ್, ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಆರ್. ಮಹೇಶ್, ಉಪನ್ಯಾಸಕಿ ಡಾ. ಆರ್. ಶಶಿಕಲಾ, ಆರೋಗ್ಯ ಇಲಾಖೆಯ ಅಪ್ತ ಸಮಾಲೋಚಕ ಶ್ರೀಕಾಂತ್, ಸೌಮ್ಯ ಉಪಸ್ಥಿತರಿದ್ದರು.