ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ಆಡಳಿತ ನಿರ್ವಹಣೆ, ಮಾಹಿತಿ ಮತ್ತು ಅಂಕಿ ಅಂಶಗಳ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಎಚ್.ಎಸ್.ನಾಗರಾಜ್ ಅವರ ನಿಧನಕ್ಕೆ ಸೋಮವಾರ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯ ನಿರ್ವಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ಸರ್ಕಾರದಲ್ಲಿ ಸೇವೆ ಸಲ್ಲಿಸಿದ ರೀತಿಯಲ್ಲಿಯೇ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಎಚ್.ಎಸ್.ನಾಗರಾಜ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅವರ ಬರವಣಿಗೆಯ ಅಚ್ಚುಕಟ್ಟುತನ ಇತರರಿಗೆ ಮಾದರಿಯಾಗಿತ್ತು ಎಂದು ಸ್ಮರಿಸಿದರು.
ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ ಮಾತನಾಡಿ, ಬಾಲ್ಯದಿಂದ ಸೇವಾವಧಿಯವರೆಗೂ ಉತ್ತಮ ಒಡನಾಟ ಹೊಂದಿದ್ದು, ಸರ್ಕಾರಿ ಕೆಲಸದ ನಿವೃತ್ತಿ ಬಳಿಕ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಶಿಸ್ತುಬದ್ದವಾಗಿ ಸೇವೆ ಸಲ್ಲಿಸಿದ್ದರು ಎಂದರು.
ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಸುಬ್ಬಪ್ಪ ಮಾತನಾಡಿ, ಸುಮಾರು 40 ವರ್ಷಗಳ ಒಡನಾಟ, ಬಾಂಧವ್ಯವಿದ್ದು ಸರ್ಕಾರದ ನಿಯಮಾಳಿಗಳಂತೆ ಸಂಘ-ಸಂಸ್ಥೆಗಳು ನಿಯಮಾವಳಿಗಳನ್ನು ರೂಪಿಸಲು ನೆರವಾಗುತ್ತಿದ್ದರು. ಅವರ ನಿಧನದಿಂದ ವೈಯಕ್ತಿಕವಾಗಿಯೂ ನಷ್ಟವಾಗಿದೆ ಎಂದರು.
ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ರೇವಣ್ಣಸ್ವಾಮಿ, ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ನಗರ್ಲೆ ಶಿವಕುಮಾರ, ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ರಾಜಶೇಖರ್, ಕಾಲೇಜು ವಿಭಾಗದ ನಿರ್ದೇಶಕ ಮೂಗೇಶಪ್ಪ, ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಇತರರು ಇದ್ದರು.
ನಾಗರಾಜ್ ಅವರು ರಾಜ್ಯ ಸರ್ಕಾರದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಉಪನಿರ್ದೇಶಕ, ಜನಸಂಖ್ಯಾಶಾಸ್ತ್ರಜ್ಞ, ಜಂಟಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ನಿರ್ದೇಶಕರಾಗಿ ನಿವೃತ್ತಿಯಾದ ನಂತರ ಬೆಂಗಳೂರಿನ ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ(ಜಸ್ಟೀಸ್) ಸಂಯೋಜನಾಧಿಕಾರಿ, ನಂತರ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ಆಡಳಿತ ನಿರ್ವಹಣೆ, ಮಾಹಿತಿ ಮತ್ತು ಅಂಕಿ ಅಂಶಗಳ ವಿಭಾಗದ ನಿರ್ದೇಶಕರಾಗಿ 2019ರ ವರೆಗೆ ಸೇವೆ ಸಲ್ಲಿಸಿದ್ದರು.