ಜಿಲ್ಲೆ

ಎಕ್ಸ್‌ಪ್ರೆಸ್ ವೇ ಚೆಕ್‌ಪೋಸ್ಟ್ ಬಳಿ ಸರಣಿ ಅಪಘಾತ

ಮದ್ದೂರು: ತಾಲೂಕಿನ ನಿಡಘಟ್ಟ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಮುಂಜಾನೆ ಸರಣಿ ಅಪಘಾತ ಸಂಭವಿಸಿದ್ದು, ಚುನಾವಣಾ ಸಿಬ್ಬಂದಿ ಆತಂಕದಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ್ಯ ಎದುರಾಗಿದೆ.


ಬೆಳಗ್ಗೆ 6 ಗಂಟೆಯಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ. ಇಬ್ಬರು ಕಾರು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿದ್ದ ಪ್ರವಾಸಿಗರು ಪ್ರಾಣಪಾಯದಿಂದ ಪಾರಾಗಿದ್ದಾರೆ.


ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ನಿಡಘಟ್ಟ ಗಡಿ ಭಾಗದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್ ನಿರ್ಮಾಣ ಮಾಡಿದ್ದು, ಬೆಂಗಳೂರಿನಿಂದ ಮೈಸೂರಿಗೆ ಅತಿ ವೇಗವಾಗಿ ತೆರಳುತ್ತಿದ್ದ ಸ್ಕೋಡಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಸ್ಕೋಡಾ ಕಾರಿನ ಹಿಂದೆಯೇ ಬರುತ್ತಿದ್ದ ಮೂರು ಕಾರುಗಳು ಸಹ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ನಾಲ್ಕೈದು ಬ್ಯಾರಿಕೇಡ್‌ಗಳು ಸಂಪೂರ್ಣವಾಗಿ ಜಖಂಗೊಂಡಿವೆ.


ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಚೆಕ್‌ಪೋಸ್ಟ್ ನಿರ್ಮಾಣದಿಂದ ಚುನಾವಣಾ ಸಿಬ್ಬಂದಿ ಭಯಭೀತರಾಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಎದುರಾಗಿದ್ದು, ವಾರದೊಳಗೆ ಆರೇಳು ಅಪಘಾತ ಪ್ರಕರಣಗಳು ನಡೆದಿವೆ. ರಸ್ತೆಯಲ್ಲಿ ಅತಿವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಇಂತಹ ಘಟನೆಗಳು ಸಂಭವಿಸುತ್ತಿವೆ. ಹೀಗಾಗಿ ಚುನಾವಣೆ ಕಾರ್ಯ ಮುಗಿಯುವವರೆಗೂ ರಸ್ತೆ ಸುರಕ್ಷತೆಯ ಬಗ್ಗೆ ಮೇಲಾಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.


ಸೋಮವಾರ ರಾತ್ರಿ ಪಾಳಿಯಲ್ಲಿ ಚೆಕ್‌ಪೋಸ್ಟ್ ಮುಖ್ಯಸ್ಥ ಪ್ರದೀಪ್, ಸಹಾಯಕ ಸಂತೋಷ್ ಹಾಗೂ ಪೇದೆ ವಿಷಕಂಠಯ್ಯ ವಾಹನಗಳನ್ನು ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮಾರುತಿ ಜೆನ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬ್ಯಾರಿಕೇಡ್‌ಗೆ ಗುದ್ದಿ ರಸ್ತೆ ವಿಭಜಕದ ಮೇಲೆ ಹೋಗಿ ನಿಂತಿತ್ತು. ಡಿಕ್ಕಿಯ ರಭಸಕ್ಕೆ ಬ್ಯಾರಿಕೇಡ್‌ಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಚುನಾವಣಾ ಸಿಬ್ಬಂದಿ ಕೂದಲೆಳೆ ಅಂತರದಿಂದ ಬದುಕುಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.