ಉಗಾರ ಬುದ್ರುಕ ಗ್ರಾಮದ ಎಕ್ಸಿಸ್ ಬ್ಯಾಂಕ್ ಎಟಿಎಂಗೆ ಗ್ರಾಹಕರು ಶ್ರದ್ಧಾಂಜಲಿ ಸಲ್ಲಿಸಿದರು. ದಾವಲ ಜಮಖಾನೆ, ಮಲಿಕ್ ಶೇಖ, ಶ್ರಾವಣ ಗೊಂಧಳಿ, ಶೇಖರ ಕಾಟಕರ, ಪ್ರದೀಪ ನಾಯಿಕ ಇತರರಿದ್ದರು. 
ಜಿಲ್ಲೆ

ಎಕ್ಸಿಸ್ ಗ್ರಾಹಕರಿಂದ ಎಟಿಎಂಗೆ ಶ್ರದ್ಧಾಂಜಲಿ!

ಕಾಗವಾಡ: ತಾಲೂಕಿನ ಉಗಾರ ಬುದ್ರುಕ ಗ್ರಾಮದ ಬಸ್ ನಿಲ್ದಾಣ ಎದುರಿನಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ಪಡೆದುಕೊಳ್ಳಲು ಗ್ರಾಹಕರು ಹೋದರೆ ಸರ್ವರ್ ಸಮಸ್ಯೆಯಿಂದ ಹಣ ಬಾರದಿದ್ದರೂ ಖಾತೆಯಲ್ಲಿ ಹಣ ಕಡಿತಗೊಂಡಿರುವ ಘಟನೆಗಳು ನಡೆಯುತ್ತಿದ್ದು, ಸಂಬಂಸಿದ ಬ್ಯಾಂಕ್ ಅಕಾರಿಗಳನ್ನು ಸಂಪರ್ಕಿಸಿದಾಗ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಮೋಸ ಹೋದ ಗ್ರಾಹಕರು ಆರೋಪಿಸಿ ಬುಧವಾರ ಎಟಿಎಂಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ನೊಂದ ಗ್ರಾಹಕ ದಾವಲ್ ಜಮಖಾನೆ, ಮಲೀಕ್ ಶೇಖ್ ಮಾತನಾಡಿ, ಎಕ್ಸಿಸ್ ಬ್ಯಾಂಕ್ ಎಟಿಎಂ ಸರ್ವರ್, ಇರ್ನ್ವಟರ್ ಸಮಸ್ಯೆಯಿಂದ ಹಣ ಪಡೆದುಕೊಳ್ಳಲು ಎಂಟ್ರಿ ಮಾಡಿದ ನಿಗದಿತ ಮೊತ್ತಕ್ಕಿಂತ ಕಡಿಮೆ ಬರುತ್ತದೆ. ಅಲ್ಲದೆ ಉಸ್ತುವಾರಿಯುಳ್ಳ ಚಿಕ್ಕೋಡಿ ಎಕ್ಸಿಸ್ ಬ್ಯಾಂಕ್ ಶಾಖೆಗೆ ದೂರು ನೀಡಿದರೆ ಅಲ್ಲಿಂದ ಹಾರಿಕೆ ಉತ್ತರ ನೀಡುತ್ತಾರೆ. ಆನ್ಯಾಯವಾದ ಹಿನ್ನೆಲೆಯಲ್ಲಿ ಎಟಿಎಂ ಮಷಿನ್‌ಗೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವುದರೊಂದಿಗೆ ಶ್ರದ್ಧಾಂಜಲಿ ಅರ್ಪಿಸಿ ಪ್ರತಿಭಟಿಸುವ ಮೂಲಕ ಅಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದ್ದೇವೆ ಎಂದರು.

ದೂರು ಸಲ್ಲಿಸಲು ದೂರದ ಚಿಕ್ಕೋಡಿ ಶಾಖೆಗೆ ಹೋಗಲು ತೊಂದರೆಯಾಗುತ್ತಿದ್ದು, ಸಂಬಂಧಪಟ್ಟ ಬ್ಯಾಂಕ್ ಅಕಾರಿಗಳು ಸೂಕ್ತ ನಿರ್ವಹಣೆ ಮಾಡಿ ಗ್ರಾಹಕರಿಗಾಗುವ ತೊಂದರೆ ತಪ್ಪಿಸಬೇಕು ಎಂದು ನೊಂದ ಗ್ರಾಹಕರಾದ ಶ್ರಾವಣ ಗೊಂಧಳಿ, ಶೇಖರ ಕಾಟಕರ, ಪ್ರದೀಪ ನಾಯಿಕ ಒತ್ತಾಯಿಸಿದ್ದಾರೆ.