ಬಸವಕಲ್ಯಾಣ: ಕಷ್ಟದಲ್ಲಿರುವ ರೈತರ ಸಮಸ್ಯೆ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಬಸವಕಲ್ಯಾಣವನ್ನು ಬರಪಿಡಿತ ತಾಲೂಕು ಎಂದು ಘೋಷಿಸಿ, ಪ್ರತಿ ಎಕರೆಗೆ ೫೦ ಸಾವಿರ ರೂ. ಎಲ್ಲ ರೈತರ ಖಾತೆಗೆ ಪರಿಹಾರ ಜಮಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಘಟಕ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳ ನಿಯೋಗದಿಂದ ಶುಕ್ರವಾರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶಾಂತಗೌಡ ಬಿರಾದಾರ ಮೂಲಕ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ ಮಾತನಾಡಿ, ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಸೋಯಾ, ತೊಗರಿ, ಉದ್ದು, ಹೆಸರು ಸೇರಿ ಇತರೆ ಬೆಳೆ ಮಳೆ ಕೊರತೆ ಕಾರಣ ನಾಶವಾಗಿದೆ. ತಾಲೂಕು ಬರಪಿಡಿತ ತಾಲೂಕು ಎಂದು ಘೋಷಿಸಿ, ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿ, ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿ ಮಾಡಿದಂತೆ ರಾಜ್ಯ ಸರ್ಕಾರ ಎಸ್‌ಎಪಿ ದರ ನಿಗದಿ ಮಾಡಿ ಪ್ರತಿಟನ್‌ಗೆ ೫೦೦ ರೂ. ಕೊಡಬೇಕು. ಕೃಷಿ ಪಂಪಸೆಟ್‌ಗಳಲ್ಲಿ ಹಗಲು ಹೊತ್ತು ಏಳು ಗಂಟೆ ಮೂರು ಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಹೊಲಗಳಿಗೆ ರಸ್ತೆ ನಿರ್ಮಿಸಬೇಕು, ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಿಸಬೇಕು ಎಂದು ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಯರಬಾಗ, ಗೌರವ ಅಧ್ಯಕ್ಷ ಕಾಶಪ್ಪ ಶೇರಿಕಾರ್, ಪ್ರಮುಖರಾದ ಬಾಬು ಬುಕ್ಕಾ ಯರಬಾಗ, ಜೈಪ್ರಕಾಶ ಸದಾನಂದೆ, ಯಶವಂತ ಪಾಟೀಲ್, ತುಕಾರಾಮ ಜಾಧವ್, ರಾಮಲಿಂಗ ಗೌರಿ, ಶರಣಪ್ಪ ಬೆಳ್ಳಗೆ, ಲಕ್ಷö್ಮಣ ಉಪ್ಪಾರ, ಕಿರಣ ಪಾಟೀಲ್, ಅನೀಲ್ ಕುಲಕರ್ಣಿ, ಮಿಲೀಂದ ಜೈರಾಮ್, ಮುಕುಂದ ಹುಬ್ಬಾರೆ, ಹುಲೆಪ್ಪ ಬಿರಾದಾರ, ವೆಂಕಟ ಕೋಪಟೆ, ರಾಜಕುಮಾರ ಎಕ್ಕಾಳ, ಗುಂಡಪ್ಪ ಭೀಮಣ್ಣ, ಮಲ್ಲಪ್ಪ ಖಾನಾಪುರ, ಲಿಂಬರಾಜ ಇತರರಿದ್ದರು.