ಜಿಲ್ಲೆ

ಎಕರೆಗೆ 25ಸಾವಿರ ರೂ. ಪರಿಹಾರಕ್ಕೆ ಆಗ್ರಹ

ಚಿತ್ರದುರ್ಗ: ಜಿಲ್ಲಾದ್ಯಂತ ಅತಿವೃಷ್ಟಿಯಿಂದಾಗಿ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಎಕರೆಗೆ ತಲಾ 25 ಸಾವಿರ ರೂ.ನಂತೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಬಾರಿ ವಾಡಿಕೆಗಿಂತಲೂ ಜಿಲ್ಲಾದ್ಯಂತ ಅತಿಯಾಗಿ ಮಳೆ ಸುರಿದು ಬೆಳೆಗಳು ಆಪೋಶನವಾಗಿವೆ. ಹೀಗಾಗಿ ವಿಳಂಬ ಮಾಡದೆ, ತ್ವರಿತ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಜಿಲ್ಲೆಯ ಪ್ರಮುಖ ಬೆಳೆಗಳಾದ ಶೇಂಗಾ, ಹತ್ತಿ, ಮೆಕ್ಕೆಜೋಳ, ಈರುಳ್ಳಿ ಸೇರಿ ಹತ್ತಾರು ಬೆಳೆಗಳ ಉತ್ಪಾದನೆಗೆ ಮುಂದಾದ ರೈತರು ಹಾನಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಜೀವನ ನಿರ್ವಹಣೆ ಕೂಡ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ಮೆಕ್ಕೆಜೋಳ ತೆನೆಯು ಮಳೆ ಕಾರಣಕ್ಕೆ ಫೋಂಗಾಸ್ ಆಗಿ ಮೊಳಕೆ ಬರುತ್ತಿದೆ. ಈರುಳ್ಳಿ ಕೊಳೆಯುತ್ತಿದೆ. ಶೇಂಗಾ ಕಾಯಿ ಜೊಳ್ಳಾಗಿದೆ. ಹತ್ತಿ ಕಾಯಿಯೂ ಶೀತಾ ಹೆಚ್ಚಾಗಿ ಉದುರಿ ರೈತರಿಗೆ ತುಂಬಾ ನಷ್ಟವಾಗಿ ತೊಂದರೆಗೆ ಸಿಲುಕಿದ್ದು, ಸಾಲ ಮಾಡಿದ ಹಣವೂ ಹಿಂದಿರುಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೋವು ತೋಡಿಕೊಂಡರು.

ಜಿಲ್ಲಾಡಳಿತ ಕೂಡಲೇ ಬೆಳೆ ಸಮೀಕ್ಷೆ ನಡೆಸಿ, ರೈತರ ವ್ಯವಸಾಯದ ಖರ್ಚಿಗೆ ಅನುಗುಣವಾಗಿ ಎಕರೆವಾರು ಪರಿಹಾರ ಘೋಷಿಸಬೇಕು. ಸಾಲ ಮನ್ನಾಕ್ಕೂ ಕ್ರಮವಹಿಸಿ ಅನ್ನದಾತರ ಹಿತ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮ ಸಕ್ರಮದಡಿ ರೈತರ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದನ್ನು ಇಲಾಖೆ ನಿಲ್ಲಿಸಿದ್ದು, ರೈತರು ಸ್ವಂತ ಖರ್ಚಿನಿಂದ ಸುಮಾರು 3-4ಲಕ್ಷ ರೂ. ವೆಚ್ಚ ಮಾಡಿ ಪಡೆಯುತ್ತಿದ್ದಾರೆ. ಇದರಿಂದಾಗಿ ರೈತರಿಗೆ ತೊಂದರೆ ಉಂಟಾಗಿದ್ದು, ಹೊಸ ನೀತಿ ರದ್ದುಗೊಳಿಸಿ, ಹಿಂದಿನಂತೆ ಸಂಪರ್ಕ ನೀಡಬೇಕು ಎಂದು ಕೋರಿದರು.

ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಪದಾಧಿಕಾರಿಗಳಾದ ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸವರಾಜ, ಪ್ರಭು, ನಾಗರಾಜ್, ರೇವಣ್ಣ, ಹೊನ್ನಪ್ಪ, ಡಿ.ಎಸ್.ಹಳ್ಳಿ ಸುಧಾ, ಲಕ್ಷ್ಮೀ ಇತರರಿದ್ದರು.