ಜಿಲ್ಲೆ

ಎಕರೆಗೆ 25 ಸಾವಿರ ರೂ. ಪರಿಹಾರಕ್ಕೆ ಆಗ್ರಹ

ಚಿತ್ರದುರ್ಗ: ರಾಜ್ಯದಲ್ಲಿ ಬರಗಾಲದಿಂದಾಗಿ ಲಕ್ಷಾಂತರ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಬೆಳೆನಷ್ಟ ಪರಿಹಾರವಾಗಿ ಮಳೆಯಾಶ್ರಿತ ಪ್ರತಿ ರೈತರ ಖಾತೆಗೆ 1ಎಕರೆಗೆ ಕನಿಷ್ಠ 25 ಸಾವಿರ ರೂ., ನೀರಾವರಿ ಸೌಲಭ್ಯ ಹೊಂದಿದ್ದವರಿಗೆ 50 ಸಾವಿರ ರೂ. ನೀಡಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಸರ್ಕಾರಕ್ಕೆ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ರೈತರಿಗೆ ಮಾರಕವಾಗಿದೆ. ಆದ್ದರಿಂದ ಈ ಹಿಂದಿನಂತೆ ಕೃಷಿ ಮಾರ್ಗಗಳ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 3, ರಾತ್ರಿ ವೇಳೆ 4 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಕೆಲ ದಿನಗಳಿಂದ ಹಗಲು ಮತ್ತು ರಾತ್ರಿ ತಲಾ 2ಗಂಟೆ ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದೆ. ಇದರಿಂದಾಗಿ ರೈತರು ನಲುಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಡ್‌ಶೆಡ್ಡಿಂಗ್‌ನಿಂದಾಗಿ ವಿದ್ಯುತ್ ಪರಿವರ್ತಕಗಳು, ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ವಿದ್ಯುತ್ ಖರೀದಿಸಿಯಾದರೂ ಕೃಷಿ ಮಾರ್ಗಗಳಿಗೆ ಪೂರೈಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೋರಿದರು.

ಸಂಘದ ಪದಾಧಿಕಾರಿಗಳಾದ ಮಂಜುಳಾ, ಹೇಮಂತಕುಮಾರ್, ಮಹದೇವಪ್ಪ, ಶಿಲ್ಪಾ, ಶಿವರಾಜ್ ಯಾದವ, ಕವಿತಾ ಇದ್ದರು.