ಜಿಲ್ಲೆ

ಎಐ ಬೆಳೆದಂತೆ ವಿಶ್ವವು ಚಿಕ್ಕದಾಗುತ್ತೆ

ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದಿಪ್​ಕುಮಾರ್​ ಹೇಳಿಕೆ

ತುಮಕೂರು: ಎಂಬಿಎ ಕೇವಲ ಪದವಿಯಲ್ಲ. ಇದು ಜಾಗತಿಕ ಅವಕಾಶಗಳಿಗೆ ಹೆಬ್ಬಾಗಿಲಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್​. ಬಿ.ಪ್ರದಿಪ್​ಕುಮಾರ್​ ಹೇಳಿದರು.

ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ವೈಸಿರಿ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಟೆಕ್ನಾಲಜಿ(ವಿಮ್​ಟೆಕ್​) ವತಿಯಿಂದ ಶನಿವಾರ ಆಯೋಜಿಸಿದ್ದ "ಎಐ- ಚಾಲಿತ ಜಗತ್ತಿನಲ್ಲಿ ಎಂಬಿಎ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ಬೆಳೆಯುತ್ತಿರುವಂತೆ ವಿಶ್ವವು ಚಿಕ್ಕದಾಗುತ್ತಿದೆ. ಇದಕ್ಕೆ ಪೂರಕವಾಗಿ ಕೌಶಲವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ವಿಮ್​ಟೆಕ್​ನ ಎಂಬಿಎ ವಿದ್ಯಾರ್ಥಿಗಳಿಗೆ ಜಪಾನ್​ನ ಕಂಪನಿಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.

ವೈಸಿರಿ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಆ್ಯಂಡ್​ ಟೆಕ್ನಾಲಜಿಯಲ್ಲಿ ಸರ್ಕಾರ, ತುಮಕೂರು ವಿಶ್ವವಿದ್ಯಾಲಯ ಮತ್ತು ಎಐಸಿಟಿಇ ಅನುಮೋದಿತ ಹೊಸ ಎಂಬಿಎ ಕೋರ್ಸ್​ನ್ನು ಪರಿಚಯಿಸಿದ್ದು, ಈ ಕೋರ್ಸ್​ ಎಐ ಮತ್ತು ಜಪಾನೀ ಭಾಷಾ ಕೌಶಲಗಳನ್ನು ಒಳಗೊಂಡಿದೆ.

ಉದ್ಯೋಗಾವಕಾಶಗಳ ಸೃಷ್ಟಿ, ಭಾಷಾ ಪರಿಣತಿ ಮತ್ತು ಸಮಗ್ರ ಪ್ರಮಾಣೀಕರಣಕ್ಕಾಗಿ ಕೌಶಲ ಆಧಾರಿತ ಪ್ರಮಾಣಪತ್ರ ಕೋರ್ಸ್​ ಅನ್ನು ನೀಡುತ್ತದೆ ಎಂದರು.

ಬೆಂಗಳೂರಿನ ಬ್ರಿಸಾ ಟೆಕ್ನಾಲಜೀಸ್​ನ ಸಂಸ್ಥಾಪಕ ಸುಭೋದ್​ ಪಾಟೀಲ್​ ಮಾತನಾಡಿ, ಚಾಟ್​ ಜಿಪಿಟಿಯಂತಹ ಎಐ -ಚಾಲಿತ ತಂತ್ರಜ್ಞಾನಗಳು ಕಂಪನಿಗಳಿಗೆ ಸಂಕೀರ್ಣ ಸಮಸ್ಯೆಗಳನ್ನು ಕೋಡಿಂಗ್​ ಇಲ್ಲದೆ ಪರಿಹರಿಸಲು ಸಹಾಯ ಮಾಡುತ್ತವೆ. ಎಐ ತಂತ್ರಜ್ಞಾನ- ಚಾಲಿತ ಕೆಲಸದ ವಾತಾವರಣವನ್ನು ಮರು ರೂಪಿಸುತ್ತಿದೆ ಎಂದು ತಿಳಿಸಿದರು.

ಎಐಯು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ, ವಿಶೇಷವಾಗಿ ಕೋ-ಪೈಲಟ್​ ಸಿಸ್ಟಮ್​ಗಳ ಮೂಲಕ ಕಾರ್ಯಪ್ರವಾಹವನ್ನು ರೂಪಾಂತರಗೊಳಿಸುತ್ತಿದೆ. ನಿರಂತರ ಕಲಿಕೆ ಮತ್ತು ಹೊಂದಿಕೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಎನ್​ಸಿಂಥೆಸಿಸ್​ ಕಂಪನಿಯ ಸಹ-ಸಂಸ್ಥಾಪಕ ಸುಬ್ರಮಣ್ಯ ದೇಸಾಯಿ ತಿಳಿಸಿದರು.

ಟಮಾಲ ಸಂಸ್ಥಾಪಕ ವಿನಯ್​ ಪ್ರಶಾಂತ್​, ಕಾಮನ್​ವೆಲ್ತ್​ ಬ್ಯಾಂಕ್​ ಆಫ್​ ಆಸ್ಟ್ರೆಲಿಯಾದ ಕ್ಯೂಆರ್​ ನಿರ್ದೇಶಕ ಅಮನ್​ ಸಕ್ಸೇನಾ, ಕಾಮನ್​ವೆಲ್ತ್​ ಬ್ಯಾಂಕ್​ ಆಫ್​ ಆಸ್ಟೇಲಿಯಾದ ಕ್ಯೂಆರ್​ ಸಹಾಯಕ ನಿರ್ದೇಶಕ ಆರ್​.ಸುನಿಲ್​, ಪೀಪಲ್​ ಆ್ಯಂಡ್​ ಕಲ್ಚರ್​ನ ಹಿರಿಯ ನಿರ್ದೇಶಕಿ ರೂಪಸಿ ಎಸ್​.ಮೂರ್ತಿ, ವೈಸಿರಿ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ಆಂಡ್​ ಟೆಕ್ನಾಲಜಿಯ ಪ್ರಾಂಶುಪಾಲೆ ಜಿ.ಅಮೂಲ್ಯಾ, ಎಂಬಿಎ ನಿರ್ದೇಶಕ ಡಾ.ಟಿ.ಎಂ.ಪ್ರಸನ್ನಕುಮಾರ್​ ಉಪಸ್ಥಿತರಿದ್ದರು.