ಜಿಲ್ಲೆ

ಎಐ ತಂತ್ರಜ್ಞಾನ ಉದ್ಯೋಗ ಸೃಷ್ಟಿ

 ಮೈಸೂರು: ಬದಲಾದ ಜಗತ್ತಿನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ, ಚಾಟ್ ಜಿಪಿಟಿ ಅಗತ್ಯವಾಗಿವೆ ಎಂದು ಮೈಸೂರು ಇನ್ಫೋಸಿಸ್‌ನ ಸಹ ಉಪಾಧ್ಯಕ್ಷ ಮಹಾಲಿಂಗೇಶ್ವರ ಎಸ್. ಧಾದೆದ್ ಹೇಳಿದರು.

ಸರಸ್ವತಿಪುರಂನ ಜೆಎಸ್‌ಎಸ್‌ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಪರಂ’ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂತ್ರಜ್ಞಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಗಂಭೀರ ಕಾಯಿಲೆ ಪತ್ತೆ ಹಚ್ಚುವ ಮಟ್ಟಕ್ಕೆ ಕೃತಕ ಬುದ್ಧಿಮತ್ತೆ ಬೆಳೆದಿದೆ. ಈ ಕೃತಕ ಬುದ್ಧಿಮತ್ತೆಯಿಂದ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತಿವೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸ್ಟಾರ್ಟ್ ಅಪ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಬೆಂಗಳೂರಿನಲ್ಲಿ 1.5 ಲಕ್ಷ ಸ್ಟಾರ್ಟ್ ಅಪ್ ಕಂಪನಿಗಳಿದ್ದು, ವಿಶ್ವದಲ್ಲೇ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಮಾತನಾಡಿ, ಬದಲಾವಣೆ ಜಗದ ನಿಯಮ. ಬದಲಾಗುತ್ತಿರುವ ಈ ಜಗತ್ತಿನಲ್ಲಿ ಸಾಧನೆ ಬಹಳ ಮುಖ್ಯ ಎಂದರು.

ಸಾಧನೆ ಎಂಬುದು ತನ್ನಿಂದ ತಾನೇ ಬರುವಂತದ್ದಲ್ಲ. ಕನಸು, ಗಮನ, ಪರಿಶ್ರಮ ಮತ್ತು ಕಾರ್ಯ ಈ ನಾಲ್ಕು ಅಂಶಗಳಿಂದ ಮಾತ್ರ ಸಾಧನೆ ಸಾಧ್ಯ. ಮಾತಿಗಿಂತ ಕೃತಿ ಲೇಸು ಎಂಬಂತೆ ಮೌನವಾಗಿ ಸಾಧಿಸಿ ಗುರಿ ಮುಟ್ಟಬೇಕು. ವಿದ್ಯಾರ್ಥಿಗಳು ಅಂಕ ಪಡೆಯುವುದರ ಜತೆಗೆ ಜೀವನ ಕೌಶಲ ಮತ್ತು ಜೀವನ ಮೌಲ್ಯ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ಸಾಧನೆ ಎಂಬುದು ಯಾರ ಸ್ವತ್ತೂ ಅಲ್ಲ. ದಿಟ್ಟ ನಿರ್ಧಾರ, ಪ್ರಯತ್ನ ಹಾಗೂ ಏಕಾಗ್ರತೆ ಇದ್ದರೆ ಸಾಧನೆ ಖಚಿತ. ಸ್ವಾಮಿ ವಿವೇಕಾನಂದರು ಹೇಳುವಂತೆ ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ನೀವೇ ಶಿಲ್ಪಿಗಳು. ನಾವು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಅರ್ಪಣಾ ಮನೋಭಾವ ಮತ್ತು ಬದ್ಧತೆಯಿಂದ ಯಶಸ್ಸು ಸಾಧಿಸಲು ಸಾಧ್ಯ. ನಾವು ಓದುವ ಕಾಲಘಟ್ಟದಲ್ಲಿದ್ದ ಅನನುಕೂಲ ಇಂದಿನ ವಿದ್ಯಾರ್ಥಿಗಳಿಗೆ ಇಲ್ಲ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ಜ್ಞಾನ ಸಂಪಾದನೆ ಮಾಡಿಕೊಳ್ಳುವ ಜತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಂಡು ಯಶಸ್ಸನ್ನು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಡಾ.ರೇಚಣ್ಣ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಬಿ. ಧ್ರುವಕುಮಾರ್ ಇದ್ದರು.