ಜಿಲ್ಲೆ

ಎಎಸ್‌ಐ ವಿಡಿಯೋ ವೈರಲ್ ತನಿಖೆಗೆ ಆದೇಶ

ಚಿತ್ರದುರ್ಗ: ಪೊಲೀಸರು ಲಂಚಕ್ಕೆ ಪೀಡಿಸಿದ ಆರೋಪದ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯ ಎಎಸ್‌ಐ ರೇವಣ್ಣ ವಿರುದ್ಧ ತನಿಖೆ ನಡೆಸಲು ಡಿವೈಎಸ್‌ಪಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಸೂಚಿಸಿದ್ದಾರೆ.

ಪಿಟಿ ಕೇಸ್ ಸಂಬಂಧಿಸಿದಂತೆ ದಂಡ ವಸೂಲಿಯ ದೃಶ್ಯವೆಂದು ಠಾಣೆಯ ಪಿಐ ತಿಳಿಸಿದ್ದಾರೆ. ಆದರೆ, ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಸಾಬೀತಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ? ಜಮೀನು ವಿವಾದ ಬಗೆಹರಿಸಿ ಅಂತ ಬಂದವರ ಬಳಿ ಎಎಸ್‌ಐ ರೇವಣ್ಣ ಲಂಚದ ಹಣಕ್ಕೆ ಚೌಕಾಸಿ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

ಜೇಬಿಗೆ ಕೈಹಾಕಿ ಹಣ ಕಸಿದುಕೊಳ್ಳಲು ಯತ್ನಿಸಿದ್ದು, ಕಡಿಮೆ ಹಣ ನೀಡಿದ್ದಕ್ಕೆ ಎಎಸ್‌ಐ ಹಣ ಬಿಸಾಕಿದ್ದಾರೆ. ಮತ್ತೋರ್ವ ಸಿಬ್ಬಂದಿ ಏಟು ಕೊಡುವ ಬೆದರಿಕೆ ಹಾಕಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ತನಿಖೆ ಬಳಿಕವೇ ಸತ್ಯ ಹೊರಬರಲಿದೆ.