ಜಿಲ್ಲೆ

ಎಆರ್‌ಕೆಗೆ ಸಚಿವ ಸ್ಥಾನಮಾನ ನೀಡಿ

ಚಾಮರಾಜನಗರ : ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪುತ್ರರಾದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಹದೇವ್ ಆಗ್ರಹಿಸಿದರು.

ಚಾಮರಾಜನಗರ ಜಿಲ್ಲೆಯಾದ ಬಳಿಕ ಈ ವರೆಗೂ ಯಾವೊಬ್ಬ ದಲಿತ ಶಾಸಕರಿಗೂ ಸಚಿವ ಸ್ಥಾನವನ್ನು ನೀಡಿಲ್ಲ. ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಮೂಲಕವೇ ನಾನು ರಾಜಕೀಯಕ್ಕೆ ಬಂದೇ ಎಂದು ಸಿದ್ದರಾಮಯ್ಯ ಅವರು ಇಂದಿಗೂ ಹೇಳಿಕೊಳ್ಳುತ್ತಲೇ ಇರುತ್ತಾರೆ. ಸಿದ್ದರಾಮಯ್ಯ ಅವರು ಎಆರ್‌ಕೆ ನಿವಾಸಕ್ಕೆ ಭೇಟಿ ನೀಡಿದ್ದಾಗಲೂ ದಿ.ಗೌರಮ್ಮ ಅವರು ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು. ಎಆರ್‌ಕೆ ಅವರಿಗೆ ಸಚಿವ ಸ್ಥಾನ ನೀಡಿದರೇ ಬಿ.ರಾಚಯ್ಯ ಅವರ ಆತ್ಮಕ್ಕೂ ಶಾಂತಿ ದೊರೆತಂತಾಗುತ್ತದೆ. ಈ ಮೂಲಕ ಸಿದ್ದರಾಮಯ್ಯ ಅವರು ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಹಿರಿಯ ಶಾಸಕರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ತಮ್ಮದೇಯಾದ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅಂತವರಿಗೆ ಸಚಿವ ಸ್ಥಾನವನ್ನು ನೀಡಿದರೆ, ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿಗೆ ಸುಮಾರು 35 ಕೋಟಿ ರೂ, ಅನುದಾನವನ್ನು ನೀಡಿದ್ದರು. ಆ ಅನುದಾನದಲ್ಲೇ ಶ್ರೀಭುವನೇಶ್ವರಿ ವೃತ್ತದಲ್ಲಿ ಬಿ.ರಾಚಯ್ಯ ಅವರ ಪ್ರತಿಮೆ ಹಾಗೂ ಹೆಬ್ಬಾಗಿಲನ್ನು ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಆದರೆ ಈ ವರೆಗೂ ಅದನ್ನು ನಿರ್ಮಾಣ ಮಾಡದೇ ನಗರಸಭೆ ನಿರ್ಲಕ್ಷ್ಯ ತೋರಿದೆ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಬಿ.ರಾಚಯ್ಯ ಪ್ರತಿಮೆ ಮತ್ತು ಹೆಬ್ಬಾಗಿಲು ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಯಳಂದೂರು ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಜೆ.ಯೋಗೇಶ್, ಸೋಮಣ್ಣ, ಶ್ರೀನಿವಾಸ್, ರೇವಣ್ಣ ಹಾಜರಿದ್ದರು.