ಜಿಲ್ಲೆ

ಎಆರ್‌ಕೆಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮವಹಿಸುತ್ತಿರುವ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ರಾಹುಲ್ ಗಾಂಧಿ ವಿಚಾರ ಮಂಚ್ ಎಂ.ರಾಜಶೇಖರ್ ಆಗ್ರಹಿಸಿದರು.

ಜಿಲ್ಲೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಕೊಳ್ಳೇಗಾಲ ಕ್ಷೇತ್ರಕ್ಕೆ 3 ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಿಸಿದ್ದಾರೆ. ಯಳಂದೂರು ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಕೊಳ್ಳೇಗಾಲದಲ್ಲಿ 250 ಹಾಸಿಗೆಯ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. 3 ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದಾರೆ. ಯಳಂದೂರು ತಾಲೂಕಿನ 33 ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಳಂದೂರು ಮತ್ತು ಸಂತೇಮರಹಳ್ಳಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಅನುದಾನ ತರಲು ಮುಂದಾಗಿದ್ದಾರೆ. ಯಳಂದೂರು ಮತ್ತು ಬಿಳಿಗಿರಿರಂಗನಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಯಳಂದೂರಿನಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣ ಮಾಡಲು ಒತ್ತು ನೀಡಿದ್ದಾರೆ. ವಸತಿ ನಿವೇಶನಗಳಿಗೆ ಬಿ-ಖಾತೆಯನ್ನು ನೀಡಿ ಎಂದು ಸದನದಲ್ಲಿ ಮಾತನಾಡಿದ್ದರು. ಸುಮಾರು 600-700 ಕೋಟಿ ರೂ, ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ.

ದಿ.ಎಚ್.ಎಸ್.ಮಹದೇವಪ್ರಸಾದ್ ಮತ್ತು ಆರ್.ಧ್ರುವನಾರಾಯಣ್ ಅವರ ಸ್ಥಾನವನ್ನು ತುಂಬಬಲ್ಲ ಎಆರ್‌ಕೆ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಆರೋಗ್ಯ ಸಮಿತಿಯ ಸದಸ್ಯ ರೇವಣ್ಣ, ಚಿಕ್ಕರಾಜು, ಈರಣ್ಣ, ಹೊನ್ನೂರು ರೂಪೇಶ್ ಹಾಜರಿದ್ದರು.