ಬಸವಕಲ್ಯಾಣ: ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿರುವ ಗೋಕುಳ ಗ್ರಾಮದ ಹರಿಓಂ ಶಿಕ್ಷಣ ಟ್ರಸ್ಟ್ನ ಸರಸ್ವತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಭ್ಯಸಿಸಿ ಎಂಬಿಬಿಎಸ್ (ವೈದ್ಯಕೀಯ)ಗೆ ಪ್ರವೇಶ ಪಡೆದ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಸರಸ್ವತಿ ಕನ್ನಡ ಮಾದ್ಯಮ ಶಾಲೆಯಲ್ಲಿ ೧ರಿಂದ ೧೦ನೇ ತರಗತಿವರೆಗೆ ಉಚಿತ ಶಿಕ್ಷಣ ಪಡೆದ ಗಂಗುಬಾಯಿ ನಾಮದೇವ ಘೋರವಾಡಿ ೨೦೨೪ರ ನೀಟ್ ಪರೀಕ್ಷೆಯಲ್ಲಿ ೧೬,೬೨೯ನೇ ರ‍್ಯಾಂಕ್ ಪಡೆದು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿರುವುದು ಪಾಲಕರು, ಶಾಲೆ ಆಡಳಿತ ಮಂಡಳಿಗಷ್ಟೇ ಅಲ್ಲದೆ ಇಡೀ ಊರಿನ ಜನರಿಗೆ ಸಂತಸ ತಂದಿದೆ.
ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಂಗುಬಾಯಿ ಅವರನ್ನು ಸನ್ಮಾನಿಸಿ ಟ್ರಸ್ಟ್ನಿಂದ ಒಂದು ಲಕ್ಷ ರೂ. ಚೆಕ್ ಮತ್ತು ಮೊಬೈಲ್, ಟ್ರಸ್ಟ್ ಸದಸ್ಯರಾದ ಲಕ್ಷ್ಮೀಬಾಯಿ ಮತ್ತು ಸುಂದರಾಬಾಯಿ ೮೦ ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಹಾರೈಸಿದರು. ಮುಖ್ಯಗುರು ಜ್ಯೋತಿ ಕಲ್ಲೂರೆ ಹಾಗೂ ಮಾಲಾಶ್ರೀ ಬಾಲಕುಂದೆ ಮತ್ತು ಎಲ್ಲ ಶಿಕ್ಷಕರು ಸೇರಿ ೫೧ ಸಾವಿರ ರೂ. ಕಾಣಿಕೆ ರೂಪದಲ್ಲಿ ನೀಡಿದರೆ, ವಿದ್ಯಾರ್ಥಿಗಳು ಸಹ ಪೆನ್ ಕೊಟ್ಟು ಸಂಭ್ರಮಿಸಿದರು.
ಸಂಸ್ಥೆ ಅಧ್ಯಕ್ಷ ದಿಲೀಪಗಿರ ಗೋಸಾವಿ ಮಾತನಾಡಿ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ಕಲ್ಪಿಸುವುದೇ ಸಂಸ್ಥೆ ಉದ್ದೇಶ. ೧೯ ವರ್ಷಗಳಿಂದ ನಯಾಪೈಸೆ ಪಡೆಯದೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೆಗಾಂವ, ಮುಖ್ಯಗುರು ಜ್ಯೋತಿ ಕಲ್ಲೂರೆ, ರಾಜಣ್ಣ ಪಂಚಾಳ, ಉಪನ್ಯಾಸಕ ಡಾ.ಮಲ್ಲೇಶ ಮಾತನಾಡಿದರು. ಪ್ರಮುಖರಾದ ಹರಿಶ್ಚಂದ್ರ ಪಾಂಚಾಳ, ಸುರೇಶ ಭುತೆ, ರಾಮ ಮಾರ್ಥಂಡ, ಗೋವಿಂದರಾವ ಬಿರಾದಾರ, ಪಾಂಡುರಂಗ ವಾಡಿಕರ್, ಬಾಬು ಬಾಲಕುಂದೆ ಇತರರಿದ್ದರು. ಮಾಲಾಶ್ರೀ ಬಾಲಕುಂದೆ ಸ್ವಾಗತಿಸಿ ನಿರೂಪಣೆ ಮಾಡಿದರು. ಲಕ್ಷ್ಮೀಸ್ವಾಮಿ ವಂದಿಸಿದರು.
ನಮ್ಮ ಶಾಲೆಯಲ್ಲಿ ಕಲಿತ ಪ್ರತಿಭಾನ್ವಿತ ವಿದ್ಯಾರ್ಥಿನಿ ಎಂಬಿಬಿಎಸ್‌ಗೆ ಪ್ರವೇಶ ಪಡೆದಿರುವುದು ಸಂತಸ ತಂದಿದೆ. ವೈದ್ಯಕೀಯ ಶಿಕ್ಷಣ ಮುಗಿಯುವವರೆಗೆ ಟ್ರಸ್ಟ್ ಹಾಗೂ ಇತರ ಸಂಘ-ಸಂಸ್ಥೆಗಳಿಂದ ಅಗತ್ಯ ಸೌಲಭ್ಯ ಕಲ್ಪಿಸಲು ಕೈಲಾದಷ್ಟು ಸಹಾಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
| ದಿಲೀಪಗಿರ ಗೋಸಾವಿ ಸಂಸ್ಥಾಪಕ ಅಧ್ಯಕ್ಷ, ಹರಿಓಂ ಶಿಕ್ಷಣ ಸಂಸ್ಥೆ ಗೋಕುಳ
ಗ್ರಾಮೀಣ ಭಾಗದಲ್ಲಿ ೧೯ ವರ್ಷಗಳಿಂದ ಯಾವುದೇ ಶುಲ್ಕವಿಲ್ಲದೆ ಉಚಿತ ಶಿಕ್ಷಣ ನೀಡುತ್ತಿರುವ ಹರಿಓಂ ಎಜುಕೇಷನ್ ಟ್ರಸ್ಟ್ನ ಕಾರ್ಯ ಮತ್ತು ಹಳ್ಳಿ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಟ್ರಸ್ಟ್ ಅಧ್ಯಕ್ಷ ದಿಲೀಪಗಿರ ಅವರ ಕಾಳಜಿ ಶ್ಲಾಘನೀಯ. ಇಂತಹ ಸಂಸ್ಥೆಗಳಿಗೆ ಸರ್ಕಾರದಿಂದ ವೇತನಾನುದಾನ ಕಲ್ಪಿಸುವುದು ಅವಶ್ಯಕ.
| ನರಸಿಂಗರೆಡ್ಡಿ ಗದಲೆಗಾಂವ ಉಪನ್ಯಾಸಕ