ಜಿಲ್ಲೆ

ಎಂದಿನಂತೆ ನೆರವೇರಿದ ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ:ಮುರುಘಾಮಠದ ಅನುಭವ ಮಂಟಪದಲ್ಲಿ 32ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸೋಮವಾರ ಎಂದಿನಂತೆ ನೆರವೇರಿತು. ಬಸವಕೇಂದ್ರ ಮುರುಘಾಮಠ,ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಂಧಿತ ಡಾ.ಶಿವಮೂರ್ತಿ ಮುರುಘಾ ಶರಣರು ವಿಚಾರಣೆಗಾಗಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಸಾಮೂಹಿಕ ಕಲ್ಯಾಣ ನಡೆಯಿತು. ಬಸವತತ್ವ ಪ್ರಚಾರ,ಶ್ರೀಮಠದ ಕಾರ್ಯ ನಿಮಿತ್ತ ಹೊರ ರಾಜ್ಯ,ವಿದೇಶಕ್ಕೆ ಶರಣರು ಹೋದಂಥ ಸಂದರ್ಭಗಳಲ್ಲಿ ಮಾತ್ರ ಅವರಿಲ್ಲದೆಯೇ ಸಾಮೂಹಿಕ ಕಲ್ಯಾಣ ಈ ಹಿಂದೆ ಶ್ರೀಮಠದಲ್ಲಿ ನಡೆದಿದೆ. ಆದರೆ, ಈಗ ಗಂಭೀರ ಆರೋಪ ಎದುರಿಸುತ್ತಿರುವ ಕಾರಣ ನಾನ್ನಿಲ್ಲದಿದ್ದರೂ ಮಠದ ಎಲ್ಲಾ ಕಾರ್ಯಕ್ರಮಗಳು ಎಂದಿನಂತೆ ಮುಂದುವರೆಯಬೇಕು ಎಂಬುದಾಗಿ ಬಂಧನಕ್ಕೂ ಮುನ್ನ ಮಠದ ಭಕ್ತರು,ವಿವಿಧ ಸಮುದಾಯಗಳ ಮುಖಂಡರ ಜೊತೆ ಚರ್ಚೆಯಾಗಿದ್ದರಿಂದಾಗಿ ಯಾವ ಸಮಸ್ಯೆ ಇಲ್ಲದೆಯೇ ಕಲ್ಯಾಣ ಮಹೋತ್ಸವ ನಡೆಯಿತು.

ಶ್ರೀಮಠದಲ್ಲಿ ಕಲ್ಯಾಣ ಮಹೋತ್ಸವದ ಜತೆಗೆ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಆರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಒಂಬತ್ತು ಜೋಡಿ ಮೊದಲೇ ಹೆಸರು ನೋಂದಾಯಿಸಿದ್ದರು. ಅದರಲ್ಲಿ ಒಬ್ಬರಿಗೆ ಭಾನುವಾರ ಅಪಘಾತವಾದ್ದರಿಂದ ಒಂದು ಜೋಡಿ ಬರಲು ಸಾಧ್ಯವಿಲ್ಲ ಎಂದು ಮುಂಚಿತವಾಗಿ ಮಠಕ್ಕೆ ಮಾಹಿತಿ ನೀಡಿದ್ದರು.

ಇನ್ನೆರಡು ಜೋಡಿ ಏಕೆ ಬಂದಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ವೈಯಕ್ತಿಕ, ಕೌಟುಂಬಿಕ ಕಾರಣದಿಂದ ಪ್ರತಿ ತಿಂಗಳು ಎರಡ್ಮೂರು ಜೋಡಿ ಗೈರಾಗುವುದು ಸಾಮಾನ್ಯ ಎಂದು ಶ್ರೀಮಠ ಸ್ಪಷ್ಟಪಡಿಸಿದೆ. ಮುರುಘಾಮಠದ ಉಸ್ತುವಾರಿ ಹಾಗೂ ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗುರುಮಠಕಲ್ ಶಾಖಾಮಠದ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಮೀಜಿ ಗೌರವ ಉಪಸ್ಥಿತಿ ಹೊಂದಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ,ಎಸ್ಜೆಎಂ ವಿದ್ಯಾಪೀಠದ ಕಾರ್ಯಕಾರಿ ಮಂಡಳಿ ಸದಸ್ಯ ಎಸ್.ಷಣ್ಮುಖಪ್ಪ, ಮಹಡಿ ಶಿವಮೂರ್ತಿ, ಸಿದ್ಧಾಪುರ ನಾಗರಾಜ್ ಇದ್ದರು.