ಧಾರವಾಡ: ಕುಷ್ಠ ರೋಗ ಯಾವುದೇ ಜನ್ಮದ ಪಾಪದ ಫಲವಲ್ಲ. ಅದು ತಿಳಿವಳಿಕೆ ಕೊರತೆ, ಮೂಢನಂಬಿಕೆಯಿಂದ ಉಲ್ಬಣಗೊಳುತ್ತಿದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದಲ್ಲಿ ಅಂಗವೈಕಲ್ಯ ತಡೆಗಟ್ಟಬಹುದು ಎಂದು ನಿವೃತ್ತ ಸರ್ಜನ್ ಡಾ. ವಿ.ಡಿ. ಕರ್ಪರಮಠ ಹೇಳಿದರು.
ನಗರದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಕುಷ್ಠ ರೋಗ ನಿಮೂಲನಾ ದಿನ ಹಾಗೂ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1952ರಲ್ಲಿ ರೋಗದ ನಿಮೂಲನೆಗೆ ಭಾರತ ಸರ್ಕಾರ ನಿರ್ಧರಿಸಿತು. ಆದರೆ, ಅಂಕಿಅಂಶಗಳ ಪ್ರಕಾರ ಇನ್ನೂ 30 ಲಕ್ಷ ಜನ ರೋಗದಿಂದ ಬಾಧಿತರಾಗಿದ್ದಾರೆ. ಜಗತ್ತಿನ 4 ಕುಷ್ಠ ರೋಗಿಗಳಲ್ಲಿ ಮೂವರು ಭಾರತೀಯರು ಇರುವುದು ದುರ್ದೈವದ ಸಂಗತಿ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಡಿಟಿ ಮಾತ್ರೆಗಳು ಉಚಿತವಾಗಿ ದೊರೆಯುತ್ತವೆ. ಇವುಗಳನ್ನು ಸೇವಿಸುವುದರಿಂದ ಕುಷ್ಠ ರೋಗದಿಂದ ಕಾಯಂ ಮುಕ್ತಿ ಪಡೆಯಬಹುದು ಎಂದರು.
ಪ್ರಾಚಾರ್ಯ ಡಾ. ಅಜಿತ ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿದರು. ಮಹಾವೀರ ಉಪಾಧ್ಯೆ ನಿರೂಪಿಸಿದರು. ಶ್ರೀಕಾಂತ ರಾಗಿ ಕಲ್ಲಾಪುರ, ಶಿವಾನಂದ ಟವಳಿ, ಮಾಲತೇಶ, ಇತರರಿದ್ದರು.
ಬಾಪೂಜಿ ಜೀವನವೇ ಒಂದು ಸಂದೇಶ: ಗಾಂಧೀಜಿಯವರು ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹ ಶಸ್ತ್ರಗಳಿಂದ ಬ್ರಿಟಿಷರನ್ನು ಮಣಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಹರಿಶ್ಚಂದ್ರ ನಾಟಕ, ಜಾನ್ ರೆಸ್ಕಿನ್ರ ಅನ್ ಟು ದಿಸ್ ಲಾಸ್ಟ್ ಮತ್ತು ಲಿಯೋ ಟಾಲ್ಸ್ಟಾಯ್ರ ದಿ ಕಿಂಗ್ಡಮ್ ಆಫ್ ಗಾಡ್ ಈಸ್ ವಿದಿನ್ ಯು ಬರಹಗಳಿಂದ ಪ್ರಭಾವಿತರಾಗಿ ಜೀವನ ರೂಪಿಸಿಕೊಂಡರು. ಬಾಪೂಜಿ ಜೀವನವೇ ಒಂದು ಸಂದೇಶ ಎಂದು ಜೆಎಸ್ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ. ಕೃಷ್ಣಮೂರ್ತಿ ಹೇಳಿದರು. ಕಾಲೇಜಿನಲ್ಲಿ ಗುರುವಾರ ಜರುಗಿದ ಗಾಂಧೀಜಿಯವರ 72ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಪಾತ್ರ ಕುರಿತು ಭುವನೇಶ್ವರಿ ಮಾತನಾಡಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಗಾಂಧೀಜಿ ಮೂರ್ತಿಗೆ ಪುಷ್ಪ ಸಮರ್ಪಿಸಿದರು. ಪ್ರೊ. ಎ.ಬಿ. ಬಿಜಾಪುರ ಪ್ರಾರ್ಥಿಸಿದರು.