ಜಿಲ್ಲೆ

ಎಂಡಿಎ: ಸಾಧಕರಿಗೆ ಶೀಘ್ರದಲ್ಲೇ ನಿವೇಶನ

ಮಂಜುನಾಥ ತಿಮ್ಮಯ್ಯ ಮೈಸೂರು

ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ವಿವಿಧ ಕ್ಷೇತ್ರಗಳ ಸಾಧಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಶೀಘ್ರದಲ್ಲೇ ಅರ್ಹ ಅರ್ಜಿದಾರರಿಗೆ ಸೈಟ್ ಹಂಚಿಕೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.

ಕಳೆದ 3 ವರ್ಷಗಳಿಂದ ಇವರೆಲ್ಲರೂ ಸೈಟ್‌ಗಾಗಿ ಎದುರು ನೋಡುತ್ತಿದ್ದರು. ಇವರ ಕಾಯುವಿಕೆಗೆ ಕೊನೆಗೂ ತೆರೆಬೀಳುವ ಕಾಲ ಸನಿಹವಾಗಿದೆ.

ರಾಜೀವನಗರದ ದೇವನೂರು 3ನೇ ಹಂತದ ಬಡಾವಣೆಯಲ್ಲಿರುವ 188 ನಿವೇಶನಗಳು ಹಂಚಿಕೆಗೆ ಲಭ್ಯ ಇವೆ. 9*9, 9*12, 12*18, 15*24 ಮೀಟರ್ ಅಳತೆಯ ತಲಾ 47 ನಿವೇಶನಗಳಿವೆ. ಇವುಗಳನ್ನು ಹಂಚಿಕೆ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಗಿದೆ. ಹಸ್ತಾಂತರವೊಂದೇ ಬಾಕಿ ಉಳಿದಿದೆ.

ಈ ನಿವೇಶನಗಳನ್ನು ಎಚ್-ಕೆಟಗರಿಯಲ್ಲಿ ಬಿಡಿ ನಿವೇಶನಗಳಾಗಿ ಸಾಧಕರಿಗೆ ಹಂಚಿಕೆ ಮಾಡಲು ನಿರ್ಧರಿಸಿತು. ಅದರಂತೆ 3 ವರ್ಷಗಳ ಹಿಂದೆ ಅಧಿಸೂಚನೆ ಹೊರಡಿಸಿತು. 2023ರ ಫೆಬ್ರವರಿಯಲ್ಲಿ ಬಿಡಿ ನಿವೇಶನಕ್ಕಾಗಿ ವಿವಿಧ ಕ್ಷೇತ್ರಗಳ ಸಾಧಕರಿಂದ ಅರ್ಜಿಯನ್ನೂ ಆಹ್ವಾನಿಸಿತ್ತು.

ರಾಜ್ಯದ ನಿವಾಸಿಯಾಗಿರುವ ಕ್ರೀಡೆ, ಕಲೆ, ವಿಜ್ಞಾನ, ಸಾಹಿತ್ಯ, ವೈದ್ಯಕೀಯ, ಸಾರ್ವಜನಿಕ ಆಡಳಿತದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆ ಪಡೆದ ವ್ಯಕ್ತಿಗಳು, ಮಾಜಿ ಸೈನಿಕರು, ಸೈನಿಕ ಸಿಬ್ಬಂದಿ, ಮುಡಾ ವ್ಯಾಪ್ತಿಯ ವಾಸ ಇರುವ ಸ್ವಾತಂತ್ರೃ ಯೋಧರು, ಮೃತ ಸರ್ಕಾರ ನೌಕರರ ಅವಲಂಬಿತರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಧಕರು ಈಗಾಗಲೇ ಎಂಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಕೊಟ್ಟಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧಕರಿಂದ 488 ಅರ್ಜಿಗಳು ಬಂದಿವೆ. ಇದರಿಂದ 9.60 ಕೋಟಿ ರೂ. ಸಂಗ್ರಹವಾಗಿದೆ. ಈ ಪ್ರಕ್ರಿಯೆ ನಡೆದು ವರ್ಷಗಳೂ ಕಳೆದರೂ ಫಲಾನುಭವಿ ಗುರುತಿಸಿ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಮುಡಾ ವತಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬುದು ನಿವೇಶನಾಕಾಂಕ್ಷಿಗಳ ಒತ್ತಾಯವಾಗಿದೆ.

ಸಾಧನೆಯನ್ನು ಪರಿಗಣಿಸಿ ಸರ್ಕಾರ ನಿವೇಶನ ನೀಡುತ್ತಿದ್ದು, ನಿವೇಶನ ಕೊಟ್ಟರೆ ಅದರಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂಬುದು ಸಾಧಕರ ಆಸೆಯಾಗಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್, ಹಿರಿಯ ನಟ ಸುಂದರ್‌ರಾಜ್ ಸೇರಿದಂತೆ ರಾಜ್ಯದ ವಿವಿಧ ಸಾಧಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ವಿಳಂಬ ಧೋರಣೆಯಿಂದ ಅರ್ಜಿದಾರರೆಲ್ಲರೂ ನಿರಾಶೆಯೊಂಡಿದ್ದಾರೆ. ಎಂಡಿಎ ಕಚೇರಿಗೂ ಅಲೆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಅರ್ಜಿದಾರರ ಆಕ್ರೋಶವಾಗಿದೆ.

ಸಾಲದ ಸುಳಿಯಲ್ಲಿ ಅರ್ಜಿದಾರರು:

ಸಾಲದ ಸುಳಿಯಲ್ಲಿ ಅರ್ಜಿದಾರರು ಸಿಲುಕಿಕೊಂಡಿದ್ದಾರೆ. ಅರ್ಜಿ ಶುಲ್ಕ 500 ರೂ., ನೋಂದಣಿ ಶುಲ್ಕ 1,000 ರೂ. ಈಗಾಗಲೇ ಸಲ್ಲಿಸಲಾಗಿದೆ. ಜತೆಗೆ ನಿವೇಶನದ ಮೊತ್ತದ ಶೇ.10ರಷ್ಟು ಮುಂಗಡ ಠೇವಣಿ(ಇಎಂಡಿ)ಯನ್ನು ಅರ್ಜಿಯೊಂದಿಗೆ ಕೊಡಲಾಗಿದೆ.

6*9 ಮೀ. ಅಳತೆಯ ನಿವೇಶನದ ದರ 5.23 ಲಕ್ಷ ರೂ. ಮೊತ್ತಕ್ಕೆ 52,300 ಇಎಂಡಿ, 9*12 ಮೀ.ಅಳತೆಯ ನಿವೇಶನದ ದರ 40.46 ಲಕ್ಷ ರೂ.ಮೊತ್ತಕ್ಕೆ 1,04,600 ರೂ. ಪಾವತಿಸಬೇಕು. ಅಂತೆಯೇ, 12*18 ಮೀ.ಅಳತೆಯ ನಿವೇಶನದ ದರ 20.92 ಲಕ್ಷ ರೂ.ಮೊತ್ತಕ್ಕೆ 2,09,200 ರೂ ಇಎಂಡಿ, 15*24 ಮೀ. ಅಳತೆ ನಿವೇಶನದ 34.86 ಲಕ್ಷ ರೂ.ಮೊತ್ತಕ್ಕೆ 3,48,600 ರೂ. ಠೇವಣಿಯನ್ನು ಅರ್ಜಿದಾರರು ಪಾವತಿಸಿದ್ದಾರೆ. ಇವರಲ್ಲಿ ಬಹುತೇಕರು ಸಾಲ ಮಾಡಿ ಹಣ ಕಟ್ಟಿದ್ದಾರೆ. ಇವರೆಲ್ಲರೂ ಬಡ್ಡಿ ಕಟ್ಟಲಾರದೇ ಕಂಗಾಲಾಗಿದ್ದಾರೆ.

ಆದರೆ ಠೇವಣಿಗೆ ಬಡ್ಡಿ ನೀಡಲ್ಲ. ಆಯ್ಕೆಯಾದವರಿಗೆ ನಿವೇಶನದ ಮೊಬಲಗಿಗೆ ಸರಿಹೊಂದಿಸಿಕೊಳ್ಳಲಾಗುತ್ತದೆ. ಆಯ್ಕೆಯಾಗದ ಅರ್ಜಿದಾರರಿಗೆ ಠೇವಣಿ ಹಣವನ್ನು ಹಿಂದುರಿಸಲಾಗುತ್ತದೆ ಎಂದು ಎಂಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ನಿವೇಶನದ ದರ ಇದೀಗ ದುಪ್ಪಟ್ಟು

ನಿವೇಶನದ ದರ ಇದೀಗ ದುಪ್ಪಟ್ಟಾಗಿದೆ. ಈ ನಿವೇಶನಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಿದಾಗ ಸೈಟ್‌ಗಳ ಬೆಲೆ ಒಂದು ಚದರ ಅಡಿಗೆ 2 ರಿಂದ 3 ಸಾವಿರ ರೂ. ಇತ್ತು. ಅದೀಗ 6 ಸಾವಿರ ರೂ.ಗೆ ಹೆಚ್ಚಳವಾಗಿದೆ.

ಈಗಿನ ಮಾರುಕಟ್ಟೆ ದರದಲ್ಲಿ 20* 30 ಅಡಿ ಅಳತೆಯ ನಿವೇಶನಕ್ಕೆ 40 ಲಕ್ಷ ರೂ., 30* 40 ಅಡಿ ಅಳತೆಯ ನಿವೇಶನಕ್ಕೆ 70 ಲಕ್ಷ ರೂ., 40*60ಅಡಿ ನಿವೇಶನಕ್ಕೆ 1.30 ಕೋಟಿ ರೂ., 50*80 ಅಡಿ ಅಳತೆಯ ನಿವೇಶನ 2 ಕೋಟಿ ರೂ. ದರ ಇದೆ ಎಂದು ರಿಯಲ್ ಎಸ್ಟೇಟ್ ಉದ್ದಿಮೆದಾರರು ತಿಳಿಸಿದ್ದಾರೆ.

ಎಲ್ಲ ರೀತಿಯ ನಿವೇಶನಗಳ ಹಂಚಿಕೆ:

50:50ರ ಅನುದಾನ ನಿವೇಶನ ಹಂಚಿಕೆ ಪ್ರಕರಣದಿಂದಾಗಿ ಬಿಡಿ ನಿವೇಶನಗಳ ಹಂಚಿಕೆಯೂ ನನೆಗುದಿಗೆ ಬಿದ್ದಿತ್ತು. ಎಂಡಿಎಯಲ್ಲಿ ನಡೆದ ವಿವಿಧ ಚಟುವಟಿಕೆಗಳು ಸೇರಿದಂತೆ ಎಲ್ಲ ಸೈಟ್‌ಗಳ ಹಂಚಿಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು.

ಇದೀಗ ಪರಿಸ್ಥಿತಿ ತಿಳಿಯಾಗಿದ್ದು, ದೈನಂದಿನ ಚಟುವಟಿಕೆಗಳು ನಡೆಯುತ್ತಿವೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೂ ಇದೀಗ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತನೆಗೊಂಡಿದ್ದು, ಶೀಘ್ರದಲ್ಲೇ ವಿವಿಧ ಕ್ಯಾಟಗರಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದೆ.

ಮಾಜಿ ಸೈನಿಕರು, ಸ್ವಾತಂತ್ರೃ ಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಶೀಘ್ರದಲ್ಲೇ ಬಿಡಿ ನಿವೇಶನ ಹಂಚಿಕೆ ಮಾಡಲಾಗುವುದು. ಈ ಕುರಿತು ಕಳೆದ ಸಭೆಯಲ್ಲೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎ.ಎನ್. ರಘುನಂದನ ನಿರ್ಗಮಿತ ಆಯುಕ್ತ, ಮೈಸೂರು ಅಭಿವೃದ್ಧಿ ಪ್ರಾಧಿಕಾರ.