ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ನಾಗಾಲೋಟ ಮುಂದುವರಿದಿದ್ದು, ಗುರುವಾರ ಮತ್ತೆ 72 ಜನರಿಗೆ ಸೋಂಕು ದೃಢಪಟ್ಟಿದೆ. ಇಬ್ಬರು ಬಲಿಯಾಗಿದ್ದಾರೆ.
ಕಳೆದ 10 ದಿನಗಳಲ್ಲಿ 350ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ ಗದಗ ಬೆಟಗೇರಿ ನಗರದಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಅವಳಿ ನಗರದ ಜನ ಬೆಚ್ಚಿ ಬೀಳುವಂತಾಗಿದೆ.
ಇಷ್ಟಾದರೂ ಜನರು ಕರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪರಸ್ಪರ ಅಂತರ ಕಾಪಾಡದಿರುವುದು, ಮಾಸ್ಕ್ ಧರಿಸದೇ ಇರುವುದರಿಂದ ವೈರಸ್ ವ್ಯಾಪಕಗೊಳ್ಳುತ್ತಿದೆ. ಹೀಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.
ಇಬ್ಬರ ಸಾವು: ಗದಗ-ಬೆಟಗೇರಿ ಕಳಸಾಪೂರ ರಿಂಗ್ ರಸ್ತೆ ಬಾಪೂಜಿ ನಗರ ನಿವಾಸಿ 54 ವರ್ಷದ ಪುರುಷ ಗುರುವಾರ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ಜು. 18ರಂದು ದಾಖಲಿಸಲಾಗಿತ್ತು.
ಕೋವಿಡ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್ಗೆ ದಾಖಲಿಸಲಾಗಿತ್ತು. ಜು. 21ರಂದು ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಅದೇ ದಿನ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ 61 ವರ್ಷದ ವೃದ್ಧ ಸೋಮವಾರ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಸಕ್ಕರೆ ಕಾಯಿಲೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಇಬ್ಬರ ಅಂತ್ಯಕ್ರಿಯೆಯನ್ನು ಕೋವಿಡ್-19 ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.