ಜಿಲ್ಲೆ

ಎಂಎಸ್‌ಜಿಪಿ ವಿರುದ್ಧ ಪ್ರತಿಭಟನೆ, ಅನಿರ್ದಿಷ್ಟಾವಧಿ ಹೋರಾಟಕ್ಕೆ ಭಕ್ತರಹಳ್ಳಿ ಗ್ರಾಪಂ, ನವ ಬೆಂಗಳೂರು ಹೋರಾಟ ಸಮಿತಿ ಬೆಂಬಲ

ದೊಡ್ಡಬಳ್ಳಾಪುರ: ಚಿಗರೇನಹಳ್ಳಿ ಎಂಎಸ್‌ಜಿಪಿ ಕಸ ಘಟಕದಲ್ಲಿ ಬಿಬಿಎಂಪಿ ಪೂರೈಕೆ ಮಾಡುವ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಜಲಮೂಲ ಸೇರಿ ಪರಿಸರ ವಿಷಯುಕ್ತ ಆಗುತ್ತಿರುವ ಕಾರಣ, ಸಾರ್ವಜನಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲು ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೂಗೇನಹಳ್ಳಿ ಗೇಟ್‌ನಲ್ಲಿ ಬುಧವಾರ ಆರಂಭವಾಗಲಿರುವ ಈ ಹೋರಾಟಕ್ಕೆ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಮತ್ತು ನವ ಬೆಂಗಳೂರು ಹೊರಾಟ ಸಮಿತಿ ಬೆಂಬಲ ನೀಡಿವೆ.

ತಾಲೂಕಿನ ಚಿಗರೇನಹಳ್ಳಿ ಸರ್ವೇ ನಂ.1, 2, 3, 7, 8 ಮತ್ತು 11ರಲ್ಲಿ ಇರುವ ಎಂಎಸ್‌ಜಿಪಿ ಕಂಪನಿ ಕಸ ವಿಲೇವಾರಿ ಘಟಕ ಜಲಮೂಲವನ್ನು ಸಂಪೂರ್ಣ ನಾಶಪಡಿಸುತ್ತಿದೆ. ಬಿಬಿಎಂಪಿ ಕಸವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ಸುತ್ತಮುತ್ತಲಿ ಗ್ರಾಮಗಳಲ್ಲಿ ಜನ, ಜಾನುವಾರುಗಳು ರೋಗ, ರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಭೂಪ್ರದೇಶವೂ ವಿಷಮಯ: ಭಕ್ತರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಹಳ್ಳಿಗಳ ಭೂಪ್ರದೇಶ ಸಂಪೂರ್ಣ ವಿಷಪೂರಿತಗೊಂಡಿದೆ. ಕೊಳವೆಬಾವಿಗಳಲ್ಲಿ ಬರುವ ನೀರು ಜಾನುವಾರುಗಳು ಸಹ ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮಗಳಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕೆಮಿಕಲ್ ನೀರು ಪೂರೈಕೆ ಹೆಚ್ಚಾಗಿ, ವಾರಕ್ಕೊಮ್ಮೆ ಕೆಡುತ್ತಿವೆ. ಇದರಿಂದ ಗ್ರಾಮಸ್ಥರಿಗೂ ಶುದ್ಧ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

ಅಳಿವಿನಂಚಿನಲ್ಲಿ ಮಾವತ್ತೂರು ಕೆರೆ: ಕಳೆದೊಂದು ವಾರದಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಸದ ರಾಶಿಯಿಂದ ಕೊಳಚೆ ನೀರು ಹೊರಬರುತ್ತಿದೆ. ಕೊಳಚೆನೀರಿನ ಹರಿವು ಹೆಚ್ಚಳದಿಂದಾಗಿ ಕಸದ ರಾಶಿಯ ಸುತ್ತ ಹಾಕಲಾಗಿದ್ದ ಕಟ್ಟೆ ಒಡೆದಿದೆ. ಈ ನೀರು ಮಾವತ್ತೂರು ಕೆರೆ ಸೇರುತ್ತಿದ್ದು, ಕೆರೆ ಅಳಿವಿನಂಚಿಗೆ ತಲುಪಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ಈವರೆಗೂ ಭಕ್ತರಹಳ್ಳಿ ಗ್ರಾಪಂನಿಂದ ಪರವಾನಿಗೆ ಪಡೆದುಕೊಂಡಿಲ್ಲ. ಗ್ರಾಪಂನಿಂದ ನಾಲ್ಕು ಬಾರಿ ನೊಟೀಸ್ ಜಾರಿ ಮಾಡಿದರೂ, ಘಟಕದ ನಿರ್ವಾಹಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿ ದಿನ 4ರಿಂದ 5 ಸಾವಿರ ಟನ್ ಕಸವನ್ನು ಇಲ್ಲಿ ಸುರಿಯಲಾಗುತ್ತಿದೆ. ಅಳತೆ ಮೀರಿ ತರುವ ಕಸ ವಿಲೇವಾರಿಯಾಗದೆ ಕೊಳೆತು ಭೂಮಿ ಸೇರುತ್ತಿದೆ. ಇದರಿಂದ ಅಂತರ್ಜಲ ವಿಷಮಯವಾಗಿದೆ. ಸಿದ್ದಲಿಂಗಯ್ಯ, ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಳೀಯವಾಗಿ ಬಿಬಿಎಂಪಿ ಯಾವುದೇ ಮೂಲಸೌಕರ್ಯ ಕಲ್ಪಿಸುವುದು ಬೇಡ. ನಮ್ಮ ಬದುಕನ್ನು ನುಂಗುತ್ತಿರುವ ಎಂಎಸ್‌ಜಿಪಿ ಘಟಕವನ್ನು ತಕ್ಷಣವೇ ಬಂದ್ ಮಾಡಿದರೆ ಸಾಕು. ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಈ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಅನಿರ್ದಿಷ್ಟಾವಧಿ ಮುಂದುವರಿಯುವುದು ನಿಶ್ಚಿತ. ಸಾರಥಿ ಸತ್ಯಪ್ರಕಾಶ್, ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಮಳೆನೀರಿನ ಜತೆಗೆ ವಿಷಯುಕ್ತ ನೀರು ಮಾವತ್ತೂರು ಕೆರೆಗೆ ಸೇರುತ್ತಿದೆ. ಈ ಕೆರೆ 500 ಎಕರೆ ವಿಶಾಲವಾಗಿದೆ. ಆದರೆ, ಕೊಳಚೆನೀರು ಸೇರಿಕೊಳ್ಳುತ್ತಿರುವುದರಿಂದ, ಅಳಿವಿನಂಚು ತಲಪುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳ ಜಲಮೂಲವೇ ಇಲ್ಲವಾಗುತ್ತದೆ. ಆದ್ದರಿಂದ, ಎಂಎಸ್‌ಜಿಪಿ ಘಟಕವನ್ನು ಕೂಡಲೆ ಬಂದ್ ಮಾಡಿಸಬೇಕು. ಬಶೀರ್, ಕೊರಟಗೆರೆ ತಾಲೂಕು ರೈತ ಸಂಘದ ಕಾರ್ಯದರ್ಶಿ