ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ಘಟಕ ಸ್ಥಗಿತಕ್ಕೆ ಆಗ್ರಹಿಸಿ 10 ದಿನ ಅನಿರ್ಧಿಷ್ಟಾವಧಿ ಧರಣಿಯ ಕಾವು ಸೋಮವಾರ ತಾತ್ಕಾಲಿಕವಾಗಿ ಶಮನವಾಗಿದೆ.
ಸಿಎಂ ಬಳಿಗೆ ನಿಯೋಗ ಕರೆದೊಯ್ದು ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮನವೊಲಿಕೆಗೆ ಮಣೆಹಾಕಿದ ನವ ಬೆಂಗಳೂರು ಹೋರಾಟ ಸಮಿತಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡುವ ನಿರ್ಧಾರ ಮಾಡಿದೆ, ಆದರೆ ಕಸದ ಲಾರಿಗಳು ಬಂದರೆ ಮತ್ತೆ ಹೋರಾಟ ಆರಂಭಿಸುವ ಇಂಗಿತ ವ್ಯಕ್ತಪಡಿಸಿದೆ.
ಚುನಾವಣೆ ಬಳಿಕ ಸಮಸ್ಯೆಗೆ ಪರಿಹಾರ: ಚಿಗರೇನಹಳ್ಳಿ ಕ್ರಾಸ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಎಂಎಲ್‌ಸಿ ಚುನಾವಣೆ ನಿಮಿತ್ತ ಸಿಎಂ ರಾಜ್ಯ ಪ್ರವಾಸದಲ್ಲಿದ್ದು, ಚುನಾವಣೆ ಬಳಿಕ ಇಲ್ಲಿನ ಸಮಸ್ಯೆಗಳ ಬಗ್ಗೆ ನಿಯೋಗ ಕರೆದೊಯ್ದು ಸಿಎಂ ಸಭೆಗೆ ಏರ್ಪಾಡು ಮಾಡಲಾಗುವುದು. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಎಂದು ಎಂದು ಹೇಳಿದರು. ಜನರ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಎಂಟಿಬಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.
ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ಕಸ ತುಂಬಿದ ಲಾರಿಗಳು ನಿಂತಿವೆ. ಅಲ್ಲಿಯೂ ಸಮಸ್ಯೆ ಎದುರಾಗಿದ್ದು, ಸಮಸ್ಯೆ ಬಿಗಡಾಯಿಸಿದೆ. ವಾರದ ಮಟ್ಟಿಗೆ ಕಸದ ಲಾರಿಗಳನ್ನು ಬಿಡಿ ಎಂದು ಮನವಿ ಮಾಡಿದರು. ಆದರೆ ಈ ಮನವಿಗೆ ಒಪ್ಪದ ಪ್ರತಿಭಟನಕಾರರು ಕಸ ತರುವುದಾದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಎಂಟಿಬಿ ಮಾತಿಗೆ ಬೆಲೆ ನೀಡುತ್ತೇವೆ: ಎಂಎಸ್‌ಜಿಪಿ ಘಟಕ ತೆರವು ಸಂಬಂಧ ಡಿ.13ರಿಂದ ಪ್ರಾರಂಭವಾಗುವ ಚಳಿಗಾಲದ ಅದಿವೇಶದಲ್ಲಿ ಪ್ರಸ್ತಾಪಿಸಲಾಗುವುದು, ಕೊರಟಗೆರೆ, ತುಮಕೂರು ಶಾಸಕರರೊಂದಿಗೆ ನಾನು ಪ್ರಶ್ನೆ ಮಾಡಲಿದ್ದೇನೆ. ಸಿಎಂ ನಿರ್ಧಾರದ ನಂತರ ಮುಂದಿನ ಹೋರಾಟ ರೂಪಿಸೋಣ ಅಲ್ಲಿಯವರೆಗೆ ಉಸ್ತುವಾರಿ ಸಚಿವರ ಮಾತಿಗೆ ಬೆಲೆ ನೀಡಿ ಹೋರಾಟ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ವೆಂಕಟರಮಣಯ್ಯ ಹೇಳುವ ಮೂಲಕ ಶಾಸಕರ ನೇತೃತ್ವದಲ್ಲಿ ಆರಂಭವಾಗಿದ್ದ 1 ದಿನದ ಸಾಂಕೇತಿಕ ಧರಣಿ ಹಿಂಪಡೆಯಲಾಯಿತು.
ರೈತರನ್ನು ಬಂಧಿಸಿರುವ ಪೊಲೀಸ್ ಕ್ರಮ ಖಂಡನೀಯ. ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಅಂತ ಹೇಳಿಕೆ ನೀಡಿದ ಶಾಸಕರು ಪ್ರತಿಭಟನಾನಿರತ ರೈತರೊಂದಿಗೆ ಸೇರಿಕೊಳ್ಳಬೇಕೋ ಅಥವಾ ಪ್ರತ್ಯೇಕ ಜಾಗದಲ್ಲಿ ಪ್ರತಿಭಟನೆ ನಡೆಸಬೇಕೋ? ಇದು ಸರಿಯಾದ ನೀತಿಯಲ್ಲ. ಜಿ.ಎನ್.ಪ್ರದೀಪ್, ನವ ಬೆಂಗಳೂರು ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಗುಂಡ್ಲಹಳ್ಳಿ ಕ್ರಾಸ್ ಬಳಿ 144 ಸೆಕ್ಷನ್ ಜಾರಿ ಮಾಡಿದ್ದಾರೆಂದರೆ, ಅದನ್ನು ಪ್ರಶ್ನಿಸದೇ ಬೇರೆ ಜಾಗ ಹಿಡಿದುಕೊಂಡಿರುವ ಕಾರಣವೇನು? 2 ದಿನ ರೈತರ ಮೇಲೆ ಪೋಲಿಸ್ ದೌರ್ಜನ್ಯದ ಕುರಿತು ಶಾಸಕರು ನಿಲುವು ಬಹಿರಂಗಪಡಿಸಿಲ್ಲ. ರಾಜಕಾರಣಕ್ಕಾಗಿ ಅನ್ನದಾತನ ಹೋರಾಟ ಹತ್ತಿಕ್ಕುವ ಪ್ರಯತ್ನ ನ್ಯಾಯಸಿಂಧುವಲ್ಲ. ಸಾರಥಿ ಸತ್ಯಪ್ರಕಾಶ್, ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ