ಜಿಲ್ಲೆ

ಎಂಎಸ್‌ಜಿಪಿ ತ್ಯಾಜ್ಯ ಘಟಕ ತೆರವುಗೊಳಿಸಿ, ಭಕ್ತರಹಳ್ಳಿ ಗ್ರಾಪಂ ಆಡಳಿತ ಮಂಡಳಿ ಮನವಿ, ಜಿಲ್ಲಾಧಿಕಾರಿ, ಸಿಇಒ, ಎಡಿಸಿಗೆ ಮನವಿ ಪತ್ರ ಸಲ್ಲಿಕೆ

ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸುತ್ತಿರುವ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಭಕ್ತರಹಳ್ಳಿ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಜಿಲ್ಲಾಧಿಕಾರಿ, ಜಿಪಂ ಸಿಇಒ, ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚಿಗರೇನಹಳ್ಳಿಯ ಸರ್ವೇ ನಂ. 1, 2, 3, 7, 8 ಮತ್ತು 11ಎಲ್ಲಿ ಎಂಎಸ್‌ಜಿಪಿ ಕಂಪನಿಯ ಸಹಯೋಗದಲ್ಲಿ ಬಿಬಿಎಂಪಿ ಮತ್ತೊಂದು ಕಸ ವಿಲೇವಾರಿ ಘಟಕ ಸ್ಥಾಪಿಸುತ್ತಿದೆ. ಈಗಾಗಲೇ ಇಲ್ಲಿರುವ ಎಂಎಸ್‌ಜಿಪಿಯ ಒಂದು ತ್ಯಾಜ್ಯ ಘಟಕದಿಂದಾಗಿ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಜಲಮೂಲ ವಿಷಮಯವಾಗುತ್ತಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ.

ಚಿಗರೇನಹಳ್ಳಿಯಲ್ಲಿ ಎಂಎಸ್‌ಜಿಪಿಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಬಳಿಕ ಸುತ್ತಮುತ್ತಲಿನ ತಣ್ಣೀರನಹಳ್ಳಿ, ಮೂಡ್ಲಕಾಳೇನಹಳ್ಳಿ, ಕಾಡತಿಪ್ಪೂರು, ಬೊಮ್ಮಹಳ್ಳಿ, ಅಂಕೋನಹಳ್ಳಿ, ಬೈಯಪ್ಪನಹಳ್ಳಿ, ಭಕ್ತರಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರು ವಿಷಮಯವಾಗುತ್ತಿದೆ. ಘಟಕದಿಂದ ಕಸದ ರಾಶಿ ಹೊರಹಾಕುವುದರಿಂದ, ಲಿಚೆಟ್‌ನ ದುರ್ನಾತ ತಣ್ಣೀರನಹಳ್ಳಿಯನ್ನು ಆವರಿಸಿದ್ದು, ಗ್ರಾಮಸ್ಥರು ಮೂಗುಮುಚ್ಚಿಕೊಂಡು ಬದುಕುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಕೊಳವೆಬಾವಿ ನೀರು ಯೋಗ್ಯವಾಗಿಲ್ಲ: ಭಕ್ತರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಹಳ್ಳಿಗಳ ಅಂತರ್ಜಲ ಸಂಪೂರ್ಣ ವಿಷಮಯವಾಗಿದೆ. ಕೊಳವೆಬಾವಿಗಳಲ್ಲಿ ಬರುವ ನೀರು ಬಳಕೆಗೆ ಯೋಗ್ಯವಾಗಿಲ್ಲ. ಗ್ರಾಮಗಳಲ್ಲಿರುವ ಶುದ್ಧಕುಡಿಯುವ ನೀರಿನ ಘಟಕಗಳಿಗೆ ರಾಸಾಯನಿಕ ನೀರು ಪೂರೈಕೆಯಾಗುತ್ತಿರುವುದರಿಂದ, ವಾರಕ್ಕೊಮ್ಮೆ ಕೆಟ್ಟು ನಿಲ್ಲುತ್ತವೆ. ಹೀಗಾಗಿ ಜೀವಜಲ ಸಿಗದೆ ಜನ, ಜಾನುವಾರು ಪರದಾಡುವಂತಾಗಿದೆ ಎಂದು ಗ್ರಾಪಂ ಜನಪ್ರತಿನಿಧಿಗಳು ಮನವಿಪತ್ರದಲ್ಲಿ ಹೇಳಿದ್ದಾರೆ.

ಕಸದ ರಾಶಿಯಿಂದ ಕೊಳಚೆನೀರು: ಕಳೆದೊಂದು ವಾರದಿಂದ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಕಸದ ರಾಶಿಯಿಂದ ಕೊಳಚೆನೀರು ಹರಿದುಬರುತ್ತಿದೆ. ಕಸದ ರಾಶಿಯ ಸುತ್ತ ಕಟ್ಟೆಯನ್ನು ಹಾಕಿದ್ದರೂ, ನೀರಿನ ಹರಿವು ಹೆಚ್ಚಾಗಿ ಕೊಳಚೆನೀರು ಹೊರಬರುತ್ತಿದೆ. ಕೆಲವು ಕಡೆ ರಾತ್ರಿ ವೇಳೆ ಕಟ್ಟೆಗಳನ್ನು ಒಡೆದು ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ, ಗ್ರಾಮದಲ್ಲಿ ದುರ್ನಾತ ಹಬ್ಬಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರತಿದಿನ 4 ಸಾವಿರ ಟನ್ ಕಸ: ಚಿಗರೇನಹಳ್ಳಿ ಗ್ರಾಮದ ಎಂಎಸ್‌ಜಿಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿನಿತ್ಯ ಬಿಬಿಎಂಪಿಯ 150-200 ಟ್ರಕ್‌ಗಳಲ್ಲಿ 3,500ರಿಂದ 4 ಸಾವಿರ ಟನ್ ಹಸಿ ಕಸ ಬರುತ್ತಿದೆ. ಆದರೆ ಈ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಎಂಎಸ್‌ಜಿಪಿ ಘಟಕ ವಿಲವಾಗಿದೆ. ಆದ್ದರಿಂದ ಘಟಕದ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್ ನೇತೃತ್ವದಲ್ಲಿ ಗ್ರಾಪಂನ ಎಲ್ಲ ಸದಸ್ಯರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಪಂ ಸಿಇಒ ಎಂ.ಆರ್. ರವಿಕುಮಾರ್, ಎಡಿಸಿ ವಿಜಯಾ ಇ ರವಿಕುಮಾರ್ ಅವರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಮುಚ್ಚಬೇಕು ಎಂಬ ಆದೇಶ ಜಾರಿಯಾಗಿಲ್ಲ: ಈ ಹಿಂದೆ ಇಲ್ಲಿ ಕಸದ ಸಮಸ್ಯೆ ತಲೆದೋರಿದಾಗ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಮತ್ತು ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರು ನೀಡಲಾಗಿತ್ತು. ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸಭೆ ಕರೆದು, ಘಟಕ ಮುಚ್ಚುವಂತೆ ಆದೇಶ ಹೊರಡಿಸಿದ್ದರು. ಈ ಆದೇಶ ಜಾರಿಗೆ ಬಂದಿರಲಿಲ್ಲ. ತದನಂತರ ಹತ್ತಾರು ಗ್ರಾಮಗಳ ಜನರು ಪಕ್ಷಾತೀತವಾಗಿ ಏಳು ದಿನ ಧರಣಿ ನಡೆಸಿದ್ದರು. ಆಗ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಧರಣಿನಿರತರು ಹಾಗೂ ಜನಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಕೊಳಚೆನೀರು ಹಳ್ಳದ ಕಡೆಗೆ ಹರಿಯದಂತೆ ತಡೆಗೋಡೆ ನಿರ್ಮಿಸುವ ಹಾಗೂ ಅಲ್ಲಿಗೆ ಕಸ ಸಾಗಿಸುವ ಬಿಬಿಎಂಪಿಯ ಲಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಬೇರೆಡೆಗೂ ಕಸ ಕೊಂಡೊಯ್ಯುವಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದಾಗಿ ಎರಡು ವರ್ಷವಾದರೂ ಯಾವುದೇ ಭರವಸೆ ಈಡೇರಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ನಾವು ಸೇವಿಸುವ ವಿಷಮಯ ನೀರಿನಿಂದಾಗಿ ನಿಧಾನವಾಗಿ ವಿಷ ನಮ್ಮ ದೇಹವನ್ನು ಸೇರುತ್ತಿದೆ. ಯಾವ ಸಮಯದಲ್ಲಿ, ಯಾವ ರೋಗ ಬಂದು ಸಾಯುತ್ತೇವೋ ಗೊತ್ತಿಲ್ಲ. ಇಂಥ ಅವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಕ್ಷಾತೀತವಾಗಿ ಬೃಹತ್ ಹೋರಾಟ ಮಾಡಲಾಗುವುದು. ಸಾರಥಿ ಸತ್ಯಪ್ರಕಾಶ್ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ